ಕಲಬುರಗಿ ಸೋಂಕಿತರ ಸಂಖ್ಯೆ ಗಣನೀಯ ಕುಸಿತ, ಜಿಮ್ಸ್‍ನಲ್ಲಿ ಬೆಡ್‍ಗಳು ಖಾಲಿ, ಖಾಲಿ

ಕಲಬುರಗಿ,ಮೇ.29: ಜಿಲ್ಲಾಡಳಿತವು ಕೈಗೊಂಡಿರುವ ಲಾಕ್‍ಡೌನ್ ಕ್ರಮವು ಯಶಸ್ವಿಯತ್ತ ಸಾಗಿದ್ದು, ಎರಡನೇ ಕೋವಿಡ್ ಅಲೆಯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವುದನ್ನು ಕೊನೆಗೂ ನಿಯಂತ್ರಣವಾಗುತ್ತಿದೆ. ಇದರಿಂದಾಗಿ ಸೋಂಕಿತರ ಸಾಂಖ್ಯೆಯು ಗಣನೀಯವಾಗಿ ಕುಸಿಯುತ್ತಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿನ ಹಾಸಿಗೆಗಳು ಖಾಲಿ, ಖಾಲಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.
ಲಾಕ್‍ಡೌನ್ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಬೆಡ್‍ಗಾಗಿ ನಡೆಯುತ್ತಿದ್ದ ಪರದಾಟ ತಪ್ಪಿದೆ.
ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮೀಸಲಿರಿಸಿದ 99 ಐಸಿಯು ಬೆಡ್‍ಗಳ ಪೈಕಿ 20,75 ಹೆಚ್‍ಡಿಯ ಬೆಡ್‍ಗಳ ಪೈಕಿ 39 ಹಾಗೂ 230 ಐಸೋಲೇಷನ್ ಬೆಡ್‍ಗಳ ಪೈಕಿ 157 ಬೆಡ್‍ಗಳು ಖಾಲಿ ಇವೆ ಎಂದು ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೇ ಆಮ್ಲಜನಕ ವೆಂಟಿಲೇಟರ್‍ಗಳ ಕೊರತೆಯೂ ಬಹುತೇಕ ಸರಿಯಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿರುವ 60 ಜಂಬೋ ಸಿಲೆಂಡರ್ ಮೂಲಕವೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚುವರಿ ಸಿಲೆಂಡರ್‍ಗಳ ಅಗತ್ಯ ಕಂಡುಬರುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಜನರು ಕೊಂಚ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.