
ಕಲಬುರಗಿ,ಜ.7-ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ವೈದ್ಯಕೀಯ ಕಾಲೇಜು/100ಕ್ಕಿಂತ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಜ.8 ರಂದು ಕೋವಿಡ್-19 ಲಸಿಕೆಯ ಡ್ರೈರನ್ ಹಮ್ಮಿಕೊಳ್ಳಲಾಗಿದೆ.
ಕಲಬುರಗಿಯಲ್ಲಿ ಜಿಮ್ಸ್ ಕಾಲೇಜ್, ಎಂ.ಆರ್.ಮೆಡಿಕಲ್ ಕಾಲೇಜ್, ನಗರದ ಶಿವಾಜಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸೇಡಂ ತಾಲ್ಲೂಕ ಆಸ್ಪತ್ರೆ, ರಟಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಚಿತ್ತಾಪುರ ತಾಲ್ಲೂಕಿನ ಹೆಬ್ಬಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆಯ ಡ್ರೈರನ್ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ “ಸಂಜೆವಾಣಿ”ಗೆ ತಿಳಿಸಿದರು.
ಮೊದಲ ಹಂತದಲ್ಲಿ ಬೆಂಗಳೂರು (ಬಿಬಿಎಂಪಿ ಒಳಗೊಂಡಂತೆ), ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಹಂತದಲ್ಲಿ ನಡೆಸಿದ ನಡೆಸಿದ ಡ್ರೈರನ್ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜ.8 ರಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡ್ರೈರನ್ ನಡೆಯಲಿದೆ.
ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಇದರ ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ಅಂಗೀಕರಿಸಲಾಗಿದೆ.