
ಕಲಬುರಗಿ: ಜು.8:ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಕುರಿತು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಮಾನ ನಿಲ್ದಾಣದ ನಿರ್ದೇಶಕ ಡಾ. ಚಿಲಕಾ ಮಹೇಶ್ ಅವರಿಂದ ಮಾಹಿತಿ ಪಡೆದುಕೊಂಡರು.
ಆ ಸಂದರ್ಭದಲ್ಲಿ ಕೆಲ ಸಮಸ್ಯೆಗಳನ್ನು ನಿರ್ದೇಶಕರು ಸಚಿವರ ಗಮನಕ್ಕೆ ತಂದು, ಮುಖ್ಯವಾಗಿ ವಿಮಾನ ಸೇವೆಗಳ ಸಂಖ್ಯೆಯಲ್ಲಿ ಕಡಿತವಾಗಿದೆ. ಇದನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಈ ಕುರಿತು ಕೇಂದ್ರ ವಿಮಾನಯಾನ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವ ಪ್ರಿಯಾಂಕ್ ಭರವಸೆ ನೀಡಿದರು.
ಕಲಬುರ್ಗಿ ವಿಮಾನ ನಿಲ್ದಾಣ ಶ್ರೀನಿವಾಸ ಸರಡಗಿ ವ್ಯಾಪ್ತಿಯಲ್ಲಿ ಬರುತ್ತದೆ. ನಿಲ್ದಾಣದ ಕಸ ವಿಲೇವಾರಿ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ನಿಲ್ದಾಣದ ಕಾರ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ನಿರ್ದೇಶಕರು ಸಚಿವರ ಗಮನಕ್ಕೆ ತಂದಾಗ ಕೂಡಲೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬನ್ವರ್ ಸಿಂಗ್ ಮೀನಾ ಅವರಿಗೆ ದೂರವಾಣಿ ಕರೆ ಮಾಡಿ ತಕ್ಷಣ ಸಮಸ್ಯೆ ಪರಿಹರಿಸುವಂತೆ ಸಚಿವರು ಸೂಚಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಬಹುಮುಖ್ಯ ಸಂಪರ್ಕ ಕೊಂಡಿಯಾಗಿರುವ ಕಲಬುರ್ಗಿ ವಿಮಾನ ನಿಲ್ದಾಣದ ಉಪಯುಕ್ತ ಬಳಕೆ ಹೆಚ್ಚಿಸಲು ಹಾಗೂ ಮತ್ತಷ್ಟು ಜನಸ್ನೇಹಿ ಹಾಗೂ ಜನೋಪಯೋಗಿ ಆಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮತ್ತು ಜಿಲ್ಲಾಡಳಿತದ ವತಿಯಿಂದ ಆಗಬೇಕಾದ ಎಲ್ಲ ಕೆಲಸಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.