ಕಲಬುರಗಿ ವಿಮಾನ ನಿಲ್ದಾಣಗೆ ಬಂದಿಳಿದ ಪ್ರಧಾನಿ ಮೋದಿ

ಕಲಬುರಗಿ,ಜ 19: ಮಹಾರಾಷ್ಟ್ರದ ಸೋಲಾಪುರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನವದೆಹಲಿಯಿಂದ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಇಂದು ಬೆಳಿಗ್ಗೆ 9.30ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸರಕಾರದ ಶಿಷ್ಟಾಚಾರದಂತೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು.
ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ, ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ್, ಶಶೀಲ್ ಜಿ. ನಮೋಶಿ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ವಿಶಾಲ ಧರ್ಗಿ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಆರ್. ಚೇತನ್ ಕುಮಾರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಹೂಗುಚ್ಛ ನೀಡಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು.
ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಲೋಪಕ್ಕೆ ಅವಕಾಶ ನೀಡದಂತೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಪೂರಕವಾಗಿ ಕಳೆದ ಎರಡು ದಿನಗಳಿಂದ ಕಲಬುರಗಿ ವಿಮಾನ ನಿಲ್ದಾಣದ ಆಗಸದಲ್ಲಿ ಯಾವುದೇ ರೀತಿಯ ಡ್ರೋನ್ ಹಾರಾಟ ನಿಷೇಧಿಸಲಾಗಿತ್ತು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಒಟ್ಟು 19 ಅಧಿಕಾರಿಗಳನ್ನು ಒಳಗೊಂಡ ತಂಡ ವಿಶೇಷ ಭದ್ರತಾ ಪಡೆ ತಂಡದೊಂದಿಗೆ ಸಮನ್ವಯತೆ ಕಾಯ್ದುಕೊಂಡು ಸುರಕ್ಷಾ ವ್ಯವಸ್ಥೆಯನ್ನು ನಿರ್ವಹಿಸಿತು. ಜೊತೆಗೆ, ನುರಿತ ವೈದ್ಯರ ತಂಡ, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೇಲ್ಕೂರ್, ಸುಭಾಷ್ ಗುತ್ತೇದಾರ್, ಮಾಲಿಕಯ್ಯ ಗುತ್ತೇದಾರ್, ಅಮರನಾಥ ಪಾಟೀಲ್, ಬಿ.ಜೆ.ಪಿ ಕಲಬುರಗಿ ನಗರಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಇದ್ದರು.
ನಂತರ ಪ್ರಧಾನಿ ಮೋದಿ ಅವರು ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ಸೋಲಾಪುರಕ್ಕೆ ಪ್ರಯಾಣ ಬೆಳೆಸಿದರು.
ಪ್ರಧಾನಮಂತ್ರಿಗೆ ಬೀಳ್ಕೊಡುಗೆ:
ಮಹಾರಾಷ್ಟ್ರದ ಸೊಲಾಪುರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ಪ್ರಯಾಣಿಸಲು ಪುನಃ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜ್ಯ ಶಿಷ್ಟಾಚಾರದಂತೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ರಸಾಯನಿಕ, ರಸಗೊಬ್ಬರ ಹಾಗೂ ಹೊಸ ನವೀಕರಣ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ, ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ಡಾ. ಉಮೇಶ ಜಾಧವ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಆರ್. ಚೇತನ ಕುಮಾರ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಅವರು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಇದ್ದರು.