ಕಲಬುರಗಿ ವಿಜನ್-2050:ವಾರದೊಳಗೆ ಇಲಾಖಾವಾರು ಸಮಿತಿ ರಚಿಸಲು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ನಿರ್ದೇಶನ

ಕಲಬುರಗಿ.ಜೂ.9: ಕಲಬುರಗಿ ವಿಜನ್-2050 ಸಾಕಾರಗೊಳಿಸಲು ಇಲಾಖಾವಾರು ಸಮಿತಿಯನ್ನು ಒಂದು ವಾರದೊಳಗೆ ರಚಿಸಿ ಸದಸ್ಯರನ್ನು ನೇಮಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕಲಬುರಗಿ ವಿಜನ್-2050 ಕುರಿತಂತೆ ಅಧಿಕಾರಿಗಳೊಂದಿಗೆ ಮೊದಲ ಸುತ್ತಿನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದಿನ 30 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆ, ಕೃಷಿ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ, ನಗರಭಿವೃದ್ಧಿ, ಗ್ರಾಮೀಣಭಿವೃದ್ಧಿ, ನೀರಾವರಿ, ಕಲೆ ಮತ್ತು ಸಾಹಿತ್ಯ ಹಾಗೂ ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳು ಕಾರ್ಯ ಪ್ರವೃತ್ತರಾಗಬೇಕು. ಅದಕ್ಕಾಗಿಯೇ 13 ರಿಂದ 14 ಸಮಿತಿಗಳನ್ನು ರಚಿಸಿ, ಸಮಿತಿ ಮೂಲಕ ಕಲಬುರಗಿ ವಿಜನ್ 2050 ಯೋಜನೆಯನ್ನು ಸಾಕಾರಗೊಳಿಸಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಂದು ಸಮಿತಿ ಚುನಾಯಿತ ಪ್ರತಿನಿಧಿ, ತಜ್ಞರು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು ಒಳಗೊಂಡಂತೆ 10 ಜನರಿಂದ ಕೂಡಿರುವಂತೆ ರಚಿಸಬೇಕು. ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಬೇಕು. ಸಮಿತಿ ರಚಿಸಿ ನಿಮ್ಮ ಹಂತದಲ್ಲಿ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಸಮಿತಿ ಸದಸ್ಯರಿಂದ ಅಗತ್ಯ ಸಲಹೆ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ಸಲಹೆ ನೀಡಿದರು.
ಸಮಿತಿಯು ಹಂತ-ಹಂತವಾಗಿ ಸಭೆ ನಡೆಸಿ ಕಲಬುರಗಿ ವಿಜನ್-2050 ಯೋಜನೆ ಬಗ್ಗೆ ಪರಿಪೂರ್ಣವಾದ ನಿರ್ದೇಶನ, ಯೋಜನೆ ಹಾಗೂ ಗುರಿಗಳನ್ನು ಸಿದ್ದಪಡಿಸಿವುದು ಮುಖ್ಯವಾಗಿದೆ ಎಂದ ಜಿಲ್ಲಾಧಿಕಾರಿಗಳು ಸಾಮಾನ್ಯವಾಗಿ ಇಲಾಖೆಗೆ ಹಂಚಿಕೆಯಾಗುವ ಅನುದಾನವನ್ನೇ ಬಳಸಿಕೊಂಡು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕು ಹಾಗೂ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದರು.
ಕಲಬುರಗಿ ವಿಜನ್ 2050 ಕುರಿತು ಪ್ರತಿಯೊಬ್ಬರೂ ಆಯಾ ಕ್ಷೇತ್ರದಲ್ಲಿ ಹೀಗೆ ಆಗಬೇಕು ಎಂದು ಕನಸು ಕಂಡಿರುತ್ತಾರೆ. ಹೀಗಾಗಿ ಎಲ್ಲರ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ಇ-ಮೇಲ್ ವಿಳಾಸ ಸೃಜಿಸಿ ಸಾರ್ವಜನಿಕವಾಗಿ ನೀಡಬೇಕು. ಈ ಮೂಲಕ ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದರು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಮಾತನಾಡಿ, ನಮ್ಮ ವಿಜನ್ ಪ್ರಕಾರ ಮುಂದಿನ 30 ವರ್ಷಗಳಲ್ಲಿ ಕಲಬುರಗಿ ಜಿಲ್ಲೆ ಅಭಿವೃದ್ಧಿ ಹೊಂದಬೇಕಾದರೆ ಬರುವ 10 ವರ್ಷಗಳ ಆದಾಯವನ್ನು ಹೆಚ್ಚಿಸುವುದು ಅತೀ ಅವಶ್ಯಕವಾಗಿದೆ. ಇದಕ್ಕಾಗಿ ಕೈಗಾರಿಕೆ, ನಗರ ಪ್ರದೇಶಾಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ಬಹುಮುಖ್ಯವಾಗಿದೆ ಎಂದು ಸಲಹೆ ನೀಡಿದರು.
ವಿಜನ್-2050 ಕುರಿತು ಯೋಜನೆ ಸಾಕಾರಕ್ಕೂ ಮುನ್ನ ಮೊದಲಿಗೆ 5 ರಿಂದ 10 ವರ್ಷಗಳಲ್ಲಿ ಯಾವ ರೀತಿಯಾಗಿ ಆದಾಯ ಬರಲಿದೆ ಎಂಬುದರ ಬಗ್ಗೆ ತಿಳಿಯುವುದು ಅವಶ್ಯಕ. ನಮ್ಮ ಭಾಗದಲ್ಲಿ ಕೃಷಿ ಪ್ರಮುಖವಾಗಿರುವುದರಿಂದ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಇದಲ್ಲದೆ ಕೈಗಾರಿಕೆಗೂ ಮಹತ್ವ ನೀಡಬೇಕಿದೆ. ಮೊದಲಿಗೆ ವಿಜನ್ ಬಗ್ಗೆ ಅಧ್ಯಯನ ಮಾಡಿ ನಂತರ ಕಾರ್ಯಕ್ರಮಗಳ ಅನುμÁ್ಠನಕ್ಕೆ ಬಗ್ಗೆ ಚರ್ಚಿಸೋಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀμï ಶಶಿ ಅವರು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.