ಕಲಬುರಗಿ: ವಾರ್ಡ ಸಮಿತಿ ರಚನೆಗೆ ಗ್ರಹಣ

ಕಲಬುರಗಿ,ಮೇ.14-ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಸ್ನೇಹಲ್ ಲೋಖಂಡೆ ಅವರು ವಾರ್ಡ್ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಿದ್ದರು. ಈಗ ಕಳೆದ ಒಂದು ತಿಂಗಳಿನಿಂದ ಕೆಲವೇ ಕೆಲವು ಅರ್ಜಿಗಳು ಮಾತ್ರ ಸ್ವೀಕೃತ ಆಗಿವೆ. ಮೇ 10ರ ತನಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ವಾರ್ಡ್ ಸಮಿತಿ ಕುರಿತು ತಿಳುವಳಿಕೆಯ ಕೊರತೆ ಉಂಟಾಗಿದ್ದರಿಂದ ಕಲಬುರ್ಗಿ ಜನರು ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಕಲಬುರ್ಗಿಯ ನಗರ ಆಡಳಿತ ಸುಧಾರಣೆ ತರುವ ಮಹತ್ವದ ವಿಚಾರ ವಾರ್ಡ್ ಸಮಿತಿ ರಚನೆ ಅನುಷ್ಠಾನಕ್ಕೆ ಆತಂಕ ಎದುರಾಗಿದೆ. ಒಂದು ಕಡೆ ಮೇಯರ್-ಉಪಮೇಯರ್ ಆಯ್ಕೆ ಪ್ರಕ್ರಿಯೆ ಕೇಸ್ ಹೈಕೋಟ್ರ್ನಲ್ಲಿ ಇರುವುದರಿಂದ ಸ್ಥಗಿತಗೊಂಡಿದೆ. ಇತ್ತ ವಾರ್ಡ್ ಸಮಸ್ಯೆಗಳಿಗೆ ಕಿವಿಕೊಡುವ ಪಾಲಿಕೆ ಸದಸ್ಯರು ಅಧಿಕಾರ ಸ್ವೀಕಾರ ಮಾಡಿಲ್ಲ. ವಾರ್ಡ್ ಜನರ ಗೋಳು ಹೇಳತೀರದಾಗಿದೆ. ಚುನಾವಣೆ ನಡೆದು ಹಲವು ತಿಂಗಳು ಕಳೆದರೂ, ನಗರದ ವಾರ್ಡಗಳಲ್ಲಿ ಸಮಸ್ಯೆಗಳ ತಾಂಡವ ನಡೆದಿದೆ. ಇತ್ತ ಮೇಯರ್ ಆಯ್ಕೆಯು ಸದ್ಯ ನಡೆಯುವಂತೆ ಕಾಣುತ್ತಿಲ್ಲ ವಾರ್ಡ್ ಸಮಿತಿ ರಚನೆಗೆ ಇನ್ನಷ್ಟು ಸಮಯ ಬೇಕಾದಂತಹ ಸ್ಥಿತಿ ಎದುರಾಗಿದೆ.
ಕಣ್ಮುಚ್ಚಿ ಕುಳಿತ ಪಾಲಿಕೆ
ಪಾಲಿಕೆ ಕೂಡ ವಾರ್ಡ್ ಸಮಿತಿ ರಚನೆ ಬಗ್ಗೆ ಸಮರ್ಪಕ ಪ್ರಚಾರ ನಡೆಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಇನ್ನು ಅರ್ಜಿ ಸ್ವೀಕೃತಿ ದಿನ ಅಂತ್ಯವಾದರೂ ಯಾವ ಜಾಗೃತಿ ಪ್ರಚಾರಗಳನ್ನು ಕೈಗೊಳ್ಳದೆ ಪಾಲಿಕೆ ಸುಮ್ಮನೆ ಕಣ್ಮುಚ್ಚಿ ಕುಳಿತಿದೆ. ಪ್ರತಿದಿನ ಬೆಳಗ್ಗೆ ಕಸ ಸಂಗ್ರಹದ ವಾಹನದ ಮೂಲಕ ಲೌಡ್ಸ್ಪೀಕರ್ ನಲ್ಲಿ ಪ್ರಚಾರ ಹಾಗೂ ವಲಯವಾರು ತಿಳುವಳಿಕೆ ಸಭೆ ಸೇರಿ ಹಲವು ಕಾರ್ಯಕ್ರಮ ನಡೆಸಿ ಜನತೆಗೆ ವಾರ್ಡ್ ಸಮಿತಿ ಬಗ್ಗೆ ಅರಿವು ಮೂಡಿಸಲು ಜನತೆ ಒತ್ತಾಯಿಸಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಬೆಂಗಳೂರಿನ ಜನಾಗ್ರಹ ಸಂಸ್ಥೆ ಮಾತ್ರ ಜಾಗೃತಿ ಸಭೆ ಮಾಡುತ್ತಿದೆ. ಹಲವು ಪ್ರತಿಷ್ಠಿತ ಸಂಘ ಸಂಸ್ಥೆಗಳ ಜೊತೆಗೆ ಮಾತನಾಡಿ ಸಮಾರಂಭವನ್ನು ಏರ್ಪಡಿಸಿ ಜನರಿಗೆ ನಗರ ಆಡಳಿತದಲ್ಲಿ ನಾಗರಿಕ ಸಹಭಾಗಿತ್ವ ಅಗತ್ಯವಾಗಿದೆ ಎನ್ನುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ವಿಪರೀತ ದಾಖಲೆಗಳ ಬೇಡಿಕೆ:
ಸಾರ್ವಜನಿಕರು ಅರ್ಜಿ ಸಲ್ಲಿಕೆಗೆ ಹಿಂದೇಟು ಹಾಕಲು ವಿಪರೀತ ದಾಖಲೆಗಳ ಬೇಡಿಕೆಯು ಒಂದಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ. ಇದರಲ್ಲಿ ಜಾತಿ ಆದಾಯ ಪ್ರಮಾಣ ಪತ್ರ ,ವಿದ್ಯಾರ್ಹತೆ ಪ್ರಮಾಣಪತ್ರ , ಸಾಮಾಜಿಕ ಸೇವೆಗೆ ಪ್ರಶಸ್ತಿ ಇದ್ದರೆ ಅದರ ದಾಖಲೆ ಹೀಗೆ ದಾಖಲೆಗಳ ಪಟ್ಟಿಯೇ ದೊಡ್ಡದಿದೆ . ಸಾರ್ವಜನಿಕರು ಸಮಯ ಹೊಂದಿಸಿಕೊಂಡು ಅರ್ಜಿ ಸಲ್ಲಿಸಲು ಬಂದರೆ , ಎಲೆಕ್ಷನ್ ವೋಟರ್ ಐಡಿ ಇದ್ದರೂ ಸಹ ಅದಕ್ಕೆ ಎಕ್ಸ್ಟ್ರಾಕ್ಟರ್ ಬೇಕೆಂದು ಮತ್ತೆ ಮರಳಿ ಕಳುಹಿಸುತ್ತಾರೆ . ಮತದಾರರ ಎಕ್ಸ್ಟ್ರಾಕ್ಟರ್ ಪಡೆದುಕೊಳ್ಳಲು ಗಂಟೆಗಳಕಾಲ ಕ್ಯೂನಲ್ಲಿ ನಿಲ್ಲಬೇಕು 65 ರೂಪಾಯಿಗಳನ್ನು ಪಾಲಿಕೆಗೆ ಪಾವತಿಸಬೇಕು. ಸಮಯಕ್ಕೆ ಸಿಗುತ್ತದೋ ಇಲ್ಲವೋ ಎನ್ನುವ ಖಾತರಿ ಇಲ್ಲ. ಮತದಾರರ ಗುರುತಿನ ಚೀಟಿಯಲ್ಲಿ ಎಪಿಕ್ ನಂಬರ್ ಜೊತೆಗೆ ಎಲ್ಲ ಮಾಹಿತಿಯೂ ಇರುತ್ತದೆ.

ಇದೆಲ್ಲ ಇರುವಾಗ ಬೇರೆ ಎಕ್ಸ್ಟ್ರಾಕ್ಟರ್ ಯಾಕೆ ಬೇಕು ಇದನ್ನು ನಿಮ್ಮ ಪಾಲಿಕೆ ತಮ್ಮ ಕಚೇರಿ ದಾಖಲೆಗಳಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದರೆ ನಮಗೆ ಅದು ಗೊತ್ತಿಲ್ಲ ಎಂದು ಹೇಳುತ್ತಾರೆ.

ದಾಖಲೆಗಳ ಸಲ್ಲಿಕೆ ಸರಳೀಕರಿಸಲು ಒತ್ತಾಯ
ಕೇವಲ (ಓಟರ್) ಎಲೆಕ್ಷನ್ ಐಡಿ ಮಾತ್ರ ಕಡ್ಡಾಯಗೊಳಿಸಿ, ಅರ್ಜಿನಮೂನೆ ಜೊತೆಗೆ ಒಂದು ಭಾವಚಿತ್ರ ವೋಟರ್ ಐಡಿ ಇದ್ದರೆ ಉಳಿದ ಮಾಹಿತಿಗಳನ್ನು (ಸಾರ್ವಜನಿಕರು) ಅರ್ಜಿ ತುಂಬಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಸಿರುವ ಅರ್ಜಿದಾರರು ಆ ವಾರ್ಡಿನ ಮತದಾರ ಹೌದೋ ಇಲ್ಲವೋ ಎಂಬುದನ್ನು ಪಾಲಿಕೆ ಪರಿಶೀಲನೆ ಮಾಡಲಿ. ಇದರಿಂದ ತುಂಬಾ ಅನುಕೂಲವಾಗುತ್ತದೆ. ಸಾರ್ವಜನಿಕರು 20-30 ವರ್ಷದ ಹಿಂದೆ ಓದಿರುವ ದಾಖಲೆಗಳನ್ನು ಎಲ್ಲಿಂದ ಹುಡುಕಿ ತರಬೇಕು, ಕೆಲವರು ಡಿಗ್ರಿ ಓದಿಲ್ಲದಿದ್ದರೂ 7ನೇ ಮತ್ತು 10ನೇ ಓದಿದ ಹಿರಿಯರು ನಗರ ಆಡಳಿತದಲ್ಲಿ ಆಸಕ್ತಿ ತೋರಿಸಿ ಅರ್ಜಿ ಸಲ್ಲಿಸಿದರೆ ಮಾಕ್ರ್ಸ್ ಕಾರ್ಡ್ ಎಲ್ಲಿಂದ ತರಬೇಕು ಎಂದು ಜನರು ಪ್ರಶ್ನಿಸುತ್ತಾರೆ. ವಾರ್ಡ್ ಅಥವಾ ನಗರದ ಅಭಿವೃದ್ಧಿಗೆ ಎಷ್ಟು ಅನುದಾನ ದೊರೆತಿದೆ, ನಮ್ಮ ವಾರ್ಡನಲ್ಲಿ ಯಾವ ಕೆಲಸ ಯಾವ ಯೋಜನೆಯ ಅಡಿ ನಡೆಯುತ್ತಿದೆ,ಯಾವ ಅಗತ್ಯ ಕೆಲಸ ಆಗಬೇಕು, ನೀರಿನ ಕೊರತೆ, ಕಸದ ನಿರ್ವಹಣೆ ಚರಂಡಿ ರಸ್ತೆಗಳ ದುಸ್ಥಿತಿ, ಬೀದಿದೀಪಗಳ ಸಮಸ್ಯೆ ಹೀಗೆ ಅನೇಕ ಸಮಸ್ಯೆಗೆ ಯಾರು ಸ್ಪಂದಿಸುವವರೇ ಇಲ್ಲ ಎಂದು ವರ್ಷವಿಡಿ ದೂರುತ್ತೇವೆ. ಆದರೆ ಸಾರ್ವಜನಿಕರು ವಾರ್ಡ್ ಸಮಿತಿ ಸದಸ್ಯರಾಗುವ ಮೂಲಕ ನಗರ ಆಡಳಿತದಲ್ಲಿ ಭಾಗವಹಿಸಿ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ವೇಳೆ ವಾಡ್ರ್ನ ಪ್ರಜ್ಞಾವಂತ ನಾಗರೀಕರು ಮುಂದೆ ಬಂದು ತಮ್ಮ ಜವಾಬ್ದಾರಿ ನಿಭಾಯಿಸಬೇಕು. ನಾವು ಪಾಲಿಕೆ ಸದಸ್ಯರು ಏನು ಮಾಡುತ್ತಿದ್ದಾರೆ ಎಂದು ತಿಳಿಯಬಹುದು. ಪಾಲಿಕೆ ಸದಸ್ಯರ ಜೊತೆಗೆ ಸಮನ್ವಯದಿಂದ ಪಾಲಿಕೆಯ ಸದಸ್ಯರಿಗೆ ಶಕ್ತಿ ತುಂಬಿ, ವಾರ್ಡ್ ಸಮಸ್ಯೆಗೆ ಧ್ವನಿಯಾಗಿ ನಿಲ್ಲಲು ವಾರ್ಡ್ ಸಮಿತಿ ಸದಸ್ಯರಾಗಲು ಮುಂದಾಗಬೇಕು ಎಂದು ಕಲಬುರಗಿ ಸ್ಮಾರ್ಟ ಸಿಟಿ ಕ್ಲಬ್ ಅಧ್ಯಕ್ಷರಾದ ಪಿ.ಎಸ್.ಮಹಾಗಾಂವಕರ್ ಮನವಿ ಮಾಡಿದ್ದಾರೆ.