ಕಲಬುರಗಿ ರೈಲ್ವೆ ವಿಭಾಗಕ್ಕೆ ಕೇಂದ್ರ ಬಜೆಟ್‍ನಲ್ಲಿ 1000ರೂ: ಎಸ್‍ಯುಸಿಐಸಿ ಖಂಡನೆ

ಕಲಬುರಗಿ:ಫೆ.4: ಕೇಂದ್ರ ಸರ್ಕಾರವು ತನ್ನ ಬಜೆಟ್‍ನಲ್ಲಿ ವಿಭಾಗೀಯ ರೈಲ್ವೆ ವಿಭಾಗಕ್ಕೆ ಕೇವಲ ಒಂದು ಸಾವಿರ ರೂ.ಗಳನ್ನು ನಿಗದಿಪಡಿಸಿದ್ದು ಉಗ್ರ ಖಂಡನಾರ್ಹವಾಗಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ತಿಳಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರವು ಆ ಮೂಲಕ ಜನರ ಅತ್ಯಗತ್ಯ ಸೇವೆಯಾಗಿರುವ ರೈಲ್ವೆಯನ್ನು ಹಾಗೂ ರೈಲಿನ ಮೇಲೆ ಅವಲಂಬಿಸಿರುವ ಸಮಸ್ತ ಜನರ ಭಾವನೆಗೆ ದ್ರೋಹ ಬಗೆದು ನಮ್ಮ ದೇಶದ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವ ಅವರ ಕ್ರಮದ ಕುರಿತು ಸೇವಾ ನಿಷ್ಠೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಹಲವು ವರ್ಷಗಳಿಂದ ಜನತೆಯ ಬೇಡಿಕೆಗಳಾಗಿರುವ ಕಲಬುರ್ಗಿ ರೈಲ್ವೆ ವಿಭಾಗದ ಅಭಿವೃದ್ಧಿ, ನಗರದಿಂದ ಬೆಂಗಳೂರಿಗೆ ಹೊಸ ಸೂಪರ್ ಫಾಸ್ಟ್ ಪ್ಯಾಸೆಂಜರ್ ಸೇರಿದಂತೆ ಪ್ಯಾಸೆಂಜರ್ ರೈಲುಗಳನ್ನು ಪುನರಾರಂಭಿಸಬೇಕೆಂಬ ಜನರ ಆಶೋತ್ತರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದಂತೆ ಆಗಿದೆ. ರೈಲ್ವೆ ಖಾಸಗೀಕರಣವನ್ನು ಹಿಂದೆ ತೆಗೆದುಕೊಳ್ಳುವ ಕ್ರಮವನ್ನು ಸಹ ಸರ್ಕಾರ ಸಮ್ಮತಿಸದಿರುವುದು ಕೇಂದ್ರ ಸರ್ಕಾರದ ಜನರ ಕುರಿತು ತೋರಿಸಿಕೊಳ್ಳುವ ಕಾಳಜಿಯು ಹಾಗೂ ಅಭಿವೃದ್ಧಿಪರ ಎಂದು ಬೊಬ್ಬೆ ಹಾಕುವ ಕ್ರಮವೂ ಸಹ ಡಾಂಬಿಕತನದಿಂದ ಕೂಡಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಅಗತ್ಯ ರೈಲು ಸೇವೆಯನ್ನು ಜನಪರವನ್ನಾಗಿ ಮಾಡಿ ಅವಶ್ಯಕ ಅಭಿವೃದ್ಧಿ ಕ್ರಮಗಳನ್ನು ಕೈಗೆತ್ತಿಕೊಂಡು ಕೂಡಲೇ ರೈಲ್ವೆ ವಿಭಾಗಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.