ಕಲಬುರಗಿ ರಂಗಾಯಣದ ಮತ್ತೊಂದು ಮೈಲಿಗಲ್ಲುದೆಹಲಿಗೆ ಹೊರಟ ಸಿರಿಪುರಂದರ ನಾಟಕ

ಕಲಬುರಗಿ:ಜು.19: ಗ್ರಾಮೀಣದೆಡೆ ರಂಗಾಯಣ ನಡೆ ಕಾರ್ಯಕ್ರಮದ ಮೂಲಕ ಹಳ್ಳಿಯಲ್ಲಿ ನಾಟಕ ಪ್ರದರ್ಶನ ಮಾಡಿ ಬಂದಿದ್ದ ಕಲಬುರಗಿ ರಂಗಾಯಣ ತಂಡವು, ಈಗ ದೇಶದ ರಾಜಧಾನಿ ದೆಹಲಿಯ ಕಡೆಗೆ ಮುಖ ಮಾಡಿದೆ.
ದೆಹಲಿಯ ಕರ್ನಾಟಕ ಸಂಘದಲ್ಲಿ ಇದೇ ೨೪ರಂದು ಭಾನುವಾರ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ರಂಗಾಯಣವು ಸಿರಿ ಪುರಂದರ ನಾಟಕ ಪ್ರದರ್ಶಿಸಲಿದೆ ಎಂದು ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ವಿವಿಧ ನಾಟಕಗಳನ್ನು ಪ್ರದರ್ಶಿಸಿ ಗಮನ ಸೆಳೆದಿರುವ ರಂಗಾಯಣವು, ತೆಲಂಗಾಣದ ರಾಜಧಾನಿ ಹೈದರಾಬಾದನಲ್ಲಿ ಬಯಲಾಟ ಪ್ರದರ್ಶಿಸಿ, ಹೊರರಾಜ್ಯಕ್ಕೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿತು. ಈಗ ದೆಹಲಿಯಲ್ಲಿ ನಾಟಕ ಪ್ರದರ್ಶಿಸಲು ಸಜ್ಜಾಗಿದೆ.
ವೈವಿದ್ಯಮಯ ವಸ್ತುಗಳ ವಿವಿಧ ನಾಟಕಗಳ ಪ್ರಯೋಗಗಳಲ್ಲದೆ, ಮಕ್ಕಳ ನಾಟಕ, ಕಥಾರಂಗ, ರಂಗಾಂತರಾಳ, ರಂಗಗೀತೆಗಾಯನ, ವಿವಿಧ ರಂಗತರಬೇತಿ ಶಿಬಿರಗಳು ಏರ್ಪಡಿಸಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆಗೆಂದು ಹೈದರಾಬಾದ ಕರ್ನಾಟಕ ವಿಮೋಚನೆ ಕಥೆಯುಳ್ಳ ನಾಟಕದ ವಿಶೇಷ ಪ್ರದರ್ಶನವನ್ನೂಮಾಡಿದೆ.
ದೆಹಲಿಯ ಕರ್ನಾಟಕ ಸಂಘವು ಇದೇ ಭಾನುವಾರ ಆಯೋಜಿಸುವ ಸಮಾರಂಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬ, ಕಲಬುರಗಿ ಸಂಸದ ಡಾ.ಉಮೇಶ ಜಾಧವ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಕಲಬುರಗಿ ಜಿಲ್ಲೆಯ ಶಾಸಕರಾದ ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ್‌ ಗುತ್ತೇದಾರ ಮುಖ್ಯಅತಿಥಿಗಳಾಗಲಿದ್ದಾರೆ. ದೆಹಲಿ ಕನ್ನಡ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದ್ದಾರೆ.