ಕಲಬುರಗಿ-ಯಾದಗಿರಿ ಜಿಲ್ಲೆಯಲ್ಲಿ ಶೀಘ್ರ ಕಾಂಗ್ರೆಸ್ ಚಿಂತನ ಶಿಬಿರಅತಿವೃಷ್ಟಿ ಘೋಷಣೆಗೆ ಈಶ್ವರ ಖಂಡ್ರೆ ಒತ್ತಾಯ

ಕಲಬುರಗಿ:ಆ.6: ಕಲಬುರಗಿ ಹಾಗೂ ಯಾದಗಿರಿ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಚಿಂತನ ಶಿಬಿರ ನಡೆದಿದೆ. ಇಷ್ಟರಲ್ಲೇ ಈ ಎರಡೂ ಜಿಲ್ಲೆಗಳಲ್ಲಿ ಚಿಂತನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.
ಇಲ್ಲಿನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಚುನಾವಣಾ ಹೊತ್ತಿಗೆ ಎಲ್ಲ ರೀತಿಯಿಂದಲೂ ಸಂಘಟಿಸುವ ಯತ್ನ ನಡೆದಿದೆ ಎಂದರು.

ಮುಂಗಾರು ಹಂಗಾಮಿನಲ್ಲಿ ಪ್ರವಾಹ ಬಂದು ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದೆ. ರಸ್ತೆಗಳು, ಸೇತುವೆಗಳು ಹಾಗೂ ಮನೆಗಳು ಕುಸಿದಿವೆ. ಜನ ಸಂಕಷ್ಟದಲ್ಲಿದ್ದಾರೆ. ಆದರೂ ಸರ್ಕಾರಕ್ಕೆ ಇದ್ಯಾವುದರ ಅಂದಾಜು ಇಲ್ಲ. ವಾರ್ಷಿಕ ಸರಾಸರಿಗಿಂತ ಹೆಚ್ಚು ಮಳೆಯಾಗಿದೆ. ಹಾಗಾಗಿ ಅತೀವೃಷ್ಠಿ ಘೋಷಿಸಬೇಕಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದೆ. ವಸ್ತುಸ್ಥಿತಿ ಹೀಗಿರುವಾಗ, ಕಲ್ಯಾಣ ಕರ್ನಾಟಕ ಹೊರತುಪಡಿಸಿ ಕೇವಲ 14 ತಾಲೂಕುಗಳನ್ನು ಮಾತ್ರ ಅತಿವೃಷ್ಟಿ ಪೀಡಿತ ಎಂದು ಘೋಷಿಸಲಾಗಿದೆ. ಈ ಕೂಡಲೇ ಸರ್ಕಾರ ನಮ್ಮ ಭಾಗದ ಎಲ್ಲ 44 ತಾಲೂಕುಗಳಲ್ಲಿಯೂ ಅತಿವೃಷ್ಟಿ ಘೋಷಣೆ ಮಾಡಬೇಕು. ಪ್ರಾಣಹಾನಿಯಾದ ಕುಟುಂಬದವರಿಗೆ ಪರಿಹಾರ ಕೊಡಬೇಕು. ಪ್ರತಿ ಹೆಕ್ಟೇರ್ ಬೆಳೆಹಾನಿಗೆ ರೂ 50,000 ಪರಿಹಾರ ಘೋಷಿಸಬೇಕು ಎಂದು ಖಂಡ್ರೆ ತಾಕೀತು ಮಾಡಿದರು.

ಈ ಸರ್ಕಾರಕ್ಕೆ ಕರುಣೆಯೇ ಇಲ್ಲ ಅನ್ನ ಹಾಲು ಹಾಗೂ ಮೊಸರಿನ ಮೇಲೆ ಸಹ ಜಿಎಸ್ ಟಿ ವಿಧಿಸಿದೆ.
ಇನ್ನೊಂದೆಡೆ, ಶ್ರೀಮಂತ ಉದ್ಯಮಿಗಳ ರೂ.9 ಲಕ್ಷ 91 ಸಾವಿರ ಕೋಟಿ ಸಾಲ ಮನ್ನಾ ಮಾಡಿರುವ ಮೋದಿ ಸರ್ಕಾರ ಬಡವರ ಮೇಲೆ ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಕಿ ಜನರ ಜೀವನ ಹೈರಾಣ ಮಾಡಿಟ್ಟಿದೆ ಎಂದು ಖಂಡ್ರೆ ಟೀಕಿಸಿದರು.

ಬ್ರಿಟಿಷರು ಉಪ್ಪಿನ ಮೇಲೆ ತೆರಿಗೆ ವಿಧಿಸಿದಾಗ ಮಹಾತ್ಮಾಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದಂತೆ ಬಡವರ ಮೇಲೆ ವಿಧಿಸಿರುವ ಜಿ.ಎಸ್.ಟಿ ಹೇರುತ್ತಿರುವ ಬಿಜೆಪಿಗರೇ ಕುರ್ಚಿ ಬಿಟ್ಟು ತೊಲಗಿ ಎಂದು ಇಂದು ಕಾಂಗ್ರೆಸ್ ದೇಶಾದ್ಯಂತ ಹೋರಾಡುತ್ತಿದೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ಯುವಕರ ಹತ್ಯೆ ಪ್ರಕರಣಗಳಲ್ಲಿ ಪರಿಹಾರ ನೀಡುವಲ್ಲಿಯೂ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಪ್ರವೀಣ್ ಹತ್ಯೆ ಕೋಮು ಗಲಭೆಯಿಂದಾಗಿದೆ ಹಾಗೂ ಫಾಜಲ್ ಹತ್ಯೆ ರೌಡಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಆಗಿರಬಹುದು ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಯುವಕರಿಗೆ ನೌಕರಿ ಕೊಡುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯುವಕರ ಬದುಕು ನರಕ ಮಾಡಿಟ್ಟಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಅರಿವು ಮೂಡಿಸಲು “ಸ್ವಾತಂತ್ರ್ಯದ ನಡಿಗೆ” ಹೆಸರಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರಿಗೆ ನಮನ ಸಲ್ಲಿಸುವುದು ಈ ನಡಿಗೆಯ ಉದ್ದೇಶವಾಗಿದೆ. ಜೊತೆಗೆ, ದೇಶದ ಜನರನ್ನು ದಾರಿ ತಪ್ಪಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನದ ವಿರುದ್ದ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಎಲ್ಲ ಜಿಲ್ಲೆಗಳಲ್ಲಿ 75 ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಳ್ಳುತ್ತಿದೆ ಎಂದು ಖಂಡ್ರೆ ಮಾಹಿತಿ ನೀಡಿದರು.

2019ರಿಂದ 21ರವರೆಗೆ ರಾಜ್ಯದಲ್ಲಿ ನೈಸರ್ಗಿಕ ವಿಕೋಪದಿಂದಾಗಿ ರೂ. 2 ಲಕ್ಷ ಕೋಟಿ ಹಾನಿಯಾಗಿದೆ. ಆದರೆ ಕೇವಲ ರೂ 3800 ಕೋಟಿ ಪರಿಹಾರ ಕೊಟ್ಟು ಕೇಂದ್ರ ಸರ್ಕಾರ ಕೈತೊಳೆದುಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ನೆಲೋಗಿ,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.


ಜನೋತ್ಸವ ಏಕೆ ರದ್ದಾಯಿತು?
ಮಾಜಿ ಸಿಎಂ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಹಮ್ಮಿಕೊಂಡ ಕುರಿತು ಟೀಕಿಸುವವರು ಬಿಜೆಪಿಯವರು ಜನೋತ್ಸವ ಮಾಡಲು ಹೊರಟಿದ್ದರ ಬಗ್ಗೆ ಏಕೆ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ? ಇಷ್ಟಕ್ಕೂ ಜನರ ಆಕ್ರೋಶ ಹೆಚ್ಚಾದ ಕಾರಣದಿಂದಾಗಿ ಜನೋತ್ಸವ ಕಾರ್ಯಕ್ರಮ ರದ್ದು ಮಾಡಬೇಕಾದ ಅನಿವಾರ್ಯತೆ ಎದುರಾಯಿತು ಎಂಬುದನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಕರ್ನಾಟಕದಲ್ಲಿ ಮಳೆ ಬಂದು ಸಾಕಷ್ಟು ಹಾನಿಯಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಎನ್.ಡಿ.ಆರ್.ಎಫ್ ಅಡಿಯಲ್ಲಿ ಪರಿಹಾರ ಮಂಜೂರು ಮಾಡುವಂತೆ ಕರ್ನಾಟಕದ ಸಂಸದರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರನ್ನು ಏಕೆ ಒತ್ತಾಯಿಸಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಮೇಲಾಗಿ, ಕೇವಲ ಮಾಜಿ ಸಿಎಂ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಆಚರಿಸಿದ ಕುರಿತು ಪ್ರಶ್ನೆ ಮಾಡುವ ಬಿಜೆಪಿಗರು ಅಮಿತ್ ಶಾ ಮುಂದೆ ಕೈಕಟ್ಟಿ ನಿಂತಿರುತ್ತಾರೆ ಎಂದು ಮಾಜಿ ಸಚಿವ ಹಾಗೂ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ವಿರುದ್ಧ ಟೀಕಾಸ್ತ್ರ ಬಳಸಿದರು.