ಕಲಬುರಗಿ-ಯಾದಗಿರಿ ಜಿಲ್ಲೆಯಲ್ಲಿ ಗುಡುಗು ಮಿಶ್ರಿತ ಭಾರಿ ಮಳೆ

ಕಲಬುರಗಿ,ಆ.3-ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
ಗುಡುಗು, ಸಿಡಿಲು ಮಿಶ್ರಿತ ಮಳೆಯೊಂದಿಗೆ ಜೋರಾದ ಗಾಳಿಯೂ ಸಹ ಬೀಸಲಿದ್ದು, ಜನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಧಾರಾಕಾರ ಮಳೆ
ನಿನ್ನೆ ರಾತ್ರಿ ಮತ್ತು ಇಂದು ಮುಂಜಾನೆಯಿಂದ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಇಂದು ಬೆಳಿಗ್ಗೆ 9.30ರ ಸುಮಾರಿಗೆ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಅಲ್ಲದೆ ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರ ಪರಿಣಾಮ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಹಳ್ಳ ಉಕ್ಕಿ ಹರಿದಿದ್ದು, ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿದೆ. ಮನೆಯಲ್ಲಿದ ದವಸ-ಧಾನ್ಯದ ಜೊತೆ ಜೊತೆಗೆ ಜಮೀನಿಗೆ ಹಾಕಲು ತಂದಿದ್ದ ರಸಗೊಬ್ಬರವೂ ನೀರು ಪಾಲಾಗಿದೆ. ಜಮೀನುಗಳಲ್ಲಿ ನೀರು ನಿಂತು ಹತ್ತಿ ಸೇರಿದಂತೆ ಮತ್ತಿತರ ಬೆಳೆ ಹಾನಿಯಾಗಿವೆ. ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ.
ಕೊಚ್ಚಿ ಹೋದ ಕುಡುಕ
ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಹಳ್ಳ ತುಂಬಿ ಹರಿದಿದ್ದು, ಮದ್ಯದ ಅಮಲಿನಲ್ಲಿ ಅದೇ ಗ್ರಾಮದ ಶ್ರೀಪತಿ ಎಂಬ ವ್ಯಕ್ತಿ ಹಳ್ಳ ದಾಟಲು ಹೋಗಿ ನೀರು ಪಾಲಾಗಿದ್ದಾನೆ. ನಂತರ ಸ್ಥಳೀಯರ ಸಹಾಯದಿಂದ ಆತನನ್ನು ರಕ್ಷಣೆ ಮಾಡಲಾಗಿದೆ.