ಕಲಬುರಗಿ: ಮೂರು ದಿನ ಅತಿಯಾದ ಬಿಸಿಗಾಳಿ, ಬಿಸಿಲು

ಕಲಬುರಗಿ,ಮೇ.16-ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚು ಬಿಸಿಲು ಮತ್ತು ಬಿಸಿ ಗಾಳಿ ಇರಬಹುದೆಂದು ಹವಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ಇದರಿಂದ ಜಿಲ್ಲೆಯ ಸಾರ್ವಜನಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುವುದರ ಕುರಿತು ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಏನು ಮಾಡಬೇಕು ?
ಸಾರ್ವಜನಿಕರು ರೆಡಿಯೋ, ಟಿ.ವಿ., ದಿನಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಕುರಿತು ಮುನ್ಸೂಚನೆಗಳನ್ನು ಪಡೆದುಕೊಳ್ಳುವುದು.
ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯುವುದು.
ಹಗುರವಾದ ತಿಳಿ ಬಣ್ಣದ, ಸಡಿಲವಾದ ಮತ್ತು ರಂದ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸುವುದು.
ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನಯ ಬಳಸುವುದು.
ಬಸ್ಸಿನಲ್ಲಿ ದೂರದ ಪ್ರಯಾಣವನ್ನು ರಾತ್ರಿ ವೇಳೆ ಮಾಡುವುದು ಉತ್ತಮ, ಒಂದು ವೇಳೆ ಪ್ರಯಾಣ ಮಾಡುವ ಸಂದರ್ಭ ಬಂದಲ್ಲಿ ಕುಡಿಯುವ ನೀರನ್ನು ಒಯ್ಯುವುದು.
ಹೊರಗಡೆ ಕೆಲಸ ಮಾಡುತ್ತಿದ್ದವರು ಟೋಪಿ ಅಥವಾ ಛತ್ರಿಯನ್ನು ಬಳಸುವುದು ಮತ್ತು ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸುವುದು.
ಓ.ಆರ್.ಎಸ್. ಮನೆಯಲ್ಲಿ ತಯಾರಿಸಿದ ಲಸ್ಸಿ, ಶರಬತ್, ನಿಂಬೆ ನೀರು, ಮಜ್ಜಿಗೆಗಳನ್ನು ಬಳಸುವುದು.
ಮನೆಯನ್ನು ತಂಪಾಗಿರಿಸಿಕೊಳ್ಳುವುದು. ಒದ್ದೆಯಾದ ಬಟ್ಟೆಗಳನ್ನು ಮತ್ತು ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ಹಾಗೂ ತಂಪಾದ ಸಮಯದಲ್ಲಿ ಕೆಲಸ ಮಾಡುವುದು.
ಕೆಲಸ ನಿರ್ವಹಿಸುವ ಗರ್ಭಿಣಿ ಮಹಿಳೆಯರು ಮತ್ತು ಅನಾರೋಗ್ಯದಲ್ಲಿರುವ ಕಾರ್ಮಿಕರ ಬಗ್ಗೆ ಹೆಚ್ಚಿನ ಗಮನ ಹರಿಸುವುದು.

ಏನು ಮಾಡಬಾರದು ?
ಮಕ್ಕಳು, ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಹತ್ತಿರ ಬಿಡಬೇಡಿ, ವಿಶೇಷವಾಗಿ ಮಧ್ಯಾಹ್ನ 12:00 ಗಂಟೆಯಿಂದ ಮಧ್ಯಾಹ್ನ 3:00ರ ನಡುವೆ ಬಿಸಿಲಿಗೆ ಹೋಗುವುದು ತಪ್ಪಿಸಿ.
ಕಪ್ಪು ಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
ಹೊರಗಿನ ತಾಪಮಾನ ಹೆಚ್ಚಾದಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ. ಮಧ್ಯಾಹ್ನ 12 ರಿಂದ ಮಧ್ಯಾಹ್ನ 3ರವರೆಗೆ ಹೊರಗಡೆ ಕೆಲಸ ಮಾಡುವುದನ್ನು ತಪ್ಪಿಸಿ.
ಅಡುಗೆ ಮಾಡುವ ಪ್ರದೇಶವನ್ನು ಸಮರ್ಪಕವಾಗಿ ಗಾಳಿಯಾಡಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆಯುವುದು.
ದೇಹವನ್ನು ನಿರ್ಜಲೀಕರಣಗೊಳಿಸುವ ಅಲ್ಕೋಹಾಲ್, ಚಹಾ, ಕಾಫಿ ಮತ್ತು ಹಾನಿಕಾರಕವಾದ ತಂಪು ಪಾನೀಯ, ಆಹಾರ ಹಾಗೂ ಹಳಸಿದ ಆಹಾರವನ್ನು ಸೇವಿಸಬಾರದು.