ಕಲಬುರಗಿ-ಮುಂಬೈ ವಿಮಾನಯಾನ ಆರಂಭ

ಕಲಬುರಗಿ,ಮಾ.25-ಕಲಬುರಗಿಯಿಂದ ಮುಂಬೈಗೆ ಇಂದಿನಿಂದ ವಿಮಾನಯಾನ ಆರಂಭವಾಗಿದೆ.
ಈ ವಿಮಾನ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಮುಂಬೈನಿಂದ ಕಲಬುರಗಿಗೆ ಆಗಮಿಸಿ ಮತ್ತೆ 9.30 ಹೊರಟು 10.30ಕ್ಕೆ ಮುಂಬೈ ತಲುಪಲಿದೆ.
ಇಂದು ಮೊದಲ ದಿನ ಈ ವಿಮಾನದಲ್ಲಿ 8 ಜನ ಪ್ರಯಾಣಿಕರು ಮುಂಬೈನಿಂದ ಕಲಬುರಗಿಗೆ ಬಂದಿಳಿದಿದ್ದಾರೆ. 22 ಜನ ಪ್ರಯಾಣಿಕರು ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಮುಂಬೈನಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್., ಱ್ಯಾಪಿಡ್ ಟೆಸ್ಟ್ ಮಾಡಲಾಗುತ್ತಿದೆ. ಜೊತೆಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಬಿಡಲಾಗುತ್ತಿದೆ. ವೈದ್ಯರ ತಂಡ ಮುಂಬೈನಿಂದ ಕಲಬುರಗಿಗೆ ಮತ್ತು ಕಲಬುರಗಿಯಿಂದ ಮುಂಬೈಗೆ ತೆರಳುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುವುದರ ಮೂಲಕ ಕೋವಿಡ್ ಸೋಂಕು ಹರಡದಂತೆ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಮುಂಬೈನಿಂದ ಕಲಬುರಗಿ ಮತ್ತು ಕಲಬುರಗಿಯಿಂದ ಮುಂಬೈಗೆ ವಿಮಾನಯಾನ ಆರಂಭವಾಗಿರುವುದರಿಂದ ಪ್ರಯಾಣಿಕರಿಗೆ ಮತ್ತು ವಾಣಿಜ್ಯ, ವಹಿವಾಟಿಕೆಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್ ತಿಳಿಸಿದ್ದಾರೆ.