
ಬೀದರ್:ಆ.7: ವಾಯಾ ಕಲಬುರಗಿ ಮಾರ್ಗವಾಗಿ ಈಗಾಗಲೇ ಬೆಂಗಳೂರು, ತಿರುಪತಿ, ಹುಬ್ಬಳ್ಳಿ, ಮುಂಬೈಗೆ ಪ್ರಾಯೋಗಿಕವಾಗಿ ರೈಲುಗಳು ಚಲಿಸಿವೆ, ಜನತೆಯ ಆಶಯದಂತೆ ಬೀದರ್‍ನಿಂದ ಯಶವಂತಪುರ ವಾಯಾ ಕಲಬುರಗಿ ಮಾರ್ಗವಾಗಿ ಶೀಘ್ರದಲ್ಲಿ ಹೊಸ ರೈಲು ಪ್ರಾರಂಭವಾಗಲಿದೆ ಎಂದು ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಭರವಸೆ ನೀಡಿದರು.
ಭಾನುವಾರ ವರ್ಚುವಲ್ ವೇದಿಕೆ ಮೂಲಕ ಬೀದರ ಸೇರಿದಂತೆ ದೇಶದ 508 ರೈಲ್ವೆ ನಿಲ್ದಾಣಗಳು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಉನ್ನತಿಕರಣಗೊಳ್ಳಲಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಐತಿಹಾಸಿಕ ಸಾಧನೆಗಳು ಆಗಿವೆ. ಇವುಗಳ ಸಾಲಿಗೆ ರೈಲ್ವೆ ನಿಲ್ದಾಣ ಅಭಿವೃದ್ದಿ ಕಾಮಗಾರಿಗಳು ಸಹ ಸೇರ್ಪಡೆಗೊಳ್ಳುತ್ತಿವೆ, ಇವುಗಳೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಸಾಧ್ಯವಾಗುತ್ತಿವೆ ಎಂದರು.
ಎರಡು ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಬೀದರ್-ಕಲಬುರಗಿ ರೈಲ್ವೆ ಲೈನ್ 1998-99ರಲ್ಲಿ ಪ್ರಾರಂಭಗೊಂಡು 2013-14ರವರೆಗೆ (16 ವರ್ಷದಲ್ಲಿ) 150 ಕೋಟಿ ಅನುದಾನದಲ್ಲಿ ಕೇವಲ 37 ಕಿಮೀ. ಪೂರ್ಣಗೊಂಡಿದ್ದು, 2014ಕ್ಕೆ ನಾನು ಸಂಸದನಾದ ಮೇಲೆ ಕೇವಲ 3 ವರ್ಷದಲ್ಲಿ, 1392 ಕೋಟಿ ಅನುದಾನದಲ್ಲಿ 73.193 ಕಿಮೀ ಕಾಮಗಾರಿ ಪೂರ್ಣಗೊಳಿಸಿ, ಅಕ್ಟೋಬರ್ 29, 2017ರಲ್ಲಿ ಪ್ರಧಾನಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಳಿಸಿರುವೆ ಎಂದರು.
ದೇಶದ 1300 ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿ ಮಾಡುವ ಗುರಿ ಇದರ ಮೊದಲ ಭಾಗವಾಗಿ 508 ರೈಲ್ವೆ ನಿಲ್ದಾಣಗಳಿಗೆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಇದರಡಿಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಉತ್ತಮ ಪಾಕಿರ್ಂಗ್ ವ್ಯವಸ್ಥೆ, ವೇಟಿಂಗ್ ರೂಪ್, ಶಾಪಿಂಗ್ ಕಾಂಪ್ಲೇಕ್ಸ್, ಪ್ಲಾಟ್ ಫಾರಂನಲ್ಲಿ ಆಸನ ವ್ಯವಸ್ತೆ ಸೇರಿದಂತೆ ನಿಲ್ದಾಣದ ಸವಾರ್ಂಗಿಣ ಅಭಿವೃದ್ಧಿಯಾಗಲಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಸುಮಾರು 250 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಹೆಚ್ಚಿನ ರೈಲ್ವೆ ನಿಲ್ದಾಣಗಲ್ಲಿ ಸೋಲಾರ ಬಳಕೆ ಮಾಡಲಾಗುತ್ತಿದೆ. ಹಸಿರುಕರಣಕ್ಕೆ ಹೆಚ್ಚು ಮಹತ್ವ ನಿಡಲಾಗಿದೆ. ಈಗಾಗಲೇ ಹೆಚ್ಚಿನ ರೈಲುಗಳಿಗೆ ವಿದ್ಯುತಿ ಚಾಲಿತ ರೈಲುಗಳಾಗಿ ಮಾರ್ಪಾಡು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳು ವಿದ್ಯುತ ಚಾಲಿತವಾಗಲಿವೆ ಇದರಿಂದ ಪರಿಸರ ರಕ್ಷಣೆಯಾಗಲಿದೆ ಎಂದರು.
ಅಮೃತ ಭಾರತ ಸ್ಷೇಷನ್ ಯೋಜನೆಯಡಿ ಬೀದರ ರೈಲ್ವೆ ನಿಲ್ದಾಣ ಅಭಿವೃದ್ಧಿ ಹೊಂದಲಿದ್ದು ಇದರ ಲಾಭ ಬೀದರ್ ಜಿಲ್ಲೆಯ ಎಲ್ಲಾ ಜನರಿಗೆ ಸಿಗಲಿದೆ. ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ ಅದರಲ್ಲಿ ಇದು ಒಂದು ಪ್ರಮುಖ ಯೋಜನೆಯಾಗಿದ್ದು ಇದು ಮುಂದಿನ ದಿನಗಳಲ್ಲಿ ಆರ್ಥಿಕ ಪ್ರಗತಿಗೆ ಸಹಕಾರವಾಗಲಿದೆ ಎಂದರು.
ರೈಲ್ವೆ ಪ್ರಯಾಣ ಬಡವರಿಗೆ ಮಾತ್ರ ಸೀಮಿತ ಎಂಬ ಹಣೆ ಪಟ್ಟಿ ಇತ್ತು ಆದರೆ ಈಗ ದೃಷ್ಠಕೋನ ಬದಲಾಗಿದೆ ಇಂದು ಎಲ್ಲಾ ವರ್ಗದ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ದೇಶದಲ್ಲಿ ಅಭಿವೃದ್ಧಿಪಡಿಸಿದ 50 ಒಂದು ಭಾರತ ರೈಲುಗಳು ಇಂದು ದೇಶದಲ್ಲಿ ಸೇವೆ ಸಲ್ಲಿಸುತ್ತಿವೆ ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ 400ಕ್ಕೆ ಏರಿಕೆಯಾಗಲಿವೆ. ಬುಲೇಟ್ ಟ್ರೇನ್ ಕಾಮಗಾರಿ ಪ್ರಗತಿಯಲ್ಲಿ ಇದು ರೈಲ್ವೆ ಪ್ರಗತಿ ಸೂಚಕವಾಗಿದೆ ಎಂದರು.
ವಿಧಾನ ಪರಿಷತ ಸದಸ್ಯ ರಘುನಾಥರಾವ ಮಲ್ಕಾಪುರ ಮಾತನಾಡಿ, ಬೀದರ್ ಜಿಲ್ಲೆಯ ಜನರು ಬೇರೆ ರೈಲ್ವೆ ನಿಲ್ದಾಣವನ್ನು ಕಂಡು ತಮ್ಮ ಜಿಲ್ಲೆಯ ರೈಲ್ವೆ ನಿಲ್ದಾಣದ ಪ್ರಗತಿಗೆ ಹಾತೋರೆಯುತ್ತಿದ್ದರು ಇಂದು ಅವರ ಕನಸು ನನಸಾಗಿದೆ ಬೀದರ್ ರೈಲು ನಿಲ್ದಾಣ ಉನ್ನತಿಯತ್ತ ಪಯಣ ಬೆಳೆಸಿದೆ ಎಂದು ಹೇಳಿದರು. ಸಂಸದರ ಪ್ರಯತ್ನದಿಂದ ಇಂದು ಬೀದರ್ ರೈಲ್ವೆ ನಿಲ್ದಾಣ ಈ ಯೋಜನೆಯಡಿ ಆಯ್ಕೆಯಾಗಿದೆ ಹಾಗೂ ಅವರ ಉತ್ತಮ ಕೆಲಸದಿಂದ ಇಂದು ಕೇಂದ್ರದ ಅನೇಕ ಯೋಜನೆಗಳ ಲಾಭ ಬೀದರ ಜಿಲ್ಲೆಯ ಜನರು ಪಡೆಯುವಂತಾಗಿದೆ. ಮುಂದಿನ ದಿನಗಳಲ್ಲಿ ಜನರ ಆರ್ಶಿವಾದ ಅವರ ಮೇಲಿರಲಿದೆ ಎಂದರು.
ಬೀದರ ದಕ್ಷಿಣ ಶಾಸಕರಾದ ಡಾ. ಶೈಲೇಂದ್ರ. ಕೆ ಬೆಲ್ದಾಳೆ, ಹುಮನ್ನಾಬಾದ ಶಾಸಕರಾದ ಡಾ. ಸಿದ್ದಲಿಂಗಪ್ಪ ಎಸ್. ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕøತ ಅಹಮದ್ ರಷೀದ್ ಖಾದ್ರಿ, ಹಜ್ ಕಮಿಟಿ ಅಧ್ಯಕ್ಷ ರಫುವುದ್ದಿನ್ ಕಚೇರಿವಾಲೆ, ರೈಲ್ವೆ ವಿಭಾಗೀಯ ಕಚೇರಿ ವ್ಯವಸ್ಥಾಪಕ ರಾಜೀವ ಕುಮಾರ ಕಂಗಲೆ, ಶಿವರಾಜ ಗಂದಗೆ, ಬಸವಲಿಂಗ ಪಟ್ಟದೇವರು, ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಶಾಲಾ- ಕಾಲೇಜಿನ ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.