ಕಲಬುರಗಿ: ಮಾರುಕಟ್ಟೆಯಲ್ಲಿ ಜನ ಜಾತ್ರೆ

ಕಲಬುರಗಿ,ಮೇ.31-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಇಂದು ಬೆಳಿಗ್ಗೆ 6 ಗಂಟೆಗೆ ತೆರೆವಾದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಗರದ ಮಾರುಕಟ್ಟೆಯಲ್ಲಿಂದು ಜನ ಜಾತ್ರೆಯೇ ಸೇರಿತ್ತು.
ಕಳೆದ ನಾಲ್ಕುದಿನಗಳಿಂದ ಅಂಗಡಿ, ಮುಂಗಟ್ಟುಗಳು ಬಂದಾಗಿದ್ದರಿಂದ ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಸಿಗದೆ ಜನ ಪರಿತಪಿಸುವಂತಾಗಿತ್ತು. ಇಂದು ಬೆಳಿಗ್ಗೆ 6 ಗಂಟೆಗೆ ಸಂಪೂರ್ಣ ಲಾಕ್ ಡೌನ್ ತೆರವಾಗುತ್ತಿದ್ದಂತೆಯೇ ಜನ ಮಾರುಕಟ್ಟೆಗಳತ್ತ ದೌಢಾಯಿಸಿದರು.
ನಗರದ ಸೂಪರ್ ಮಾರ್ಕೆಟ್ ನಲ್ಲಂತೂ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಜನಸಂದಣಿ ಹೆಚ್ಚಾಗಿತ್ತು. ಜನ ಮಾಸ್ಕ ಧರಿಸಿದ್ದರೂ ದೈಹಿಕ ಅಂತರ ಮಾತ್ರ ಮರೀಚಿಕೆಯಾಗಿತ್ತು. ಮಾರುಕಟ್ಟೆಯ ರಸ್ತೆಯುದ್ದಕ್ಕೂ ವಾಹನಗಳ ಮತ್ತು ಜನರ ಓಡಾಟ ಜೋರಾಗಿಯೇ ಇತ್ತು. ಜನ ಸಂದಣಿ ಮತ್ತು ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಅದನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ತರಕಾರಿ, ದಿನಸಿ ಅಂಗಡಿಗಳ ಮುಂದೆ ಜನ ದೈಹಿಕ ಅಂತರ ಕಾಪಾಡಿಕೊಳ್ಳದೆ ಮುಗಿಬಿದ್ದು ಖರೀದಿಯಲ್ಲಿ ನಿರತರಾದದ್ದು ಕಂಡುಬಂತು. 10 ಗಂಟೆಯಷ್ಟೊತ್ತಿಗೆ ಸಿಕ್ಕಷ್ಟು ಬೆಲೆಗೆ ತರಕಾರಿ, ದಿನಸಿ ಕೊಂಡು ಜನ ಮನೆಗಳತ್ತ ಹೆಚ್ಚೆ ಹಾಕಿದರೆ, ವ್ಯಾಪಾರಸ್ಥರು ಸಹ ಬಂದಷ್ಟು ಬೆಲೆಗೆ ಹಣ್ಣು, ತರಕಾರಿ ಮಾರಾಟ ಮಾಡಿ ಮನೆಗಳತ್ತ ಹೊರಟರು.
ಸಂಪೂರ್ಣ ಲಾಕ್ ಡೌನ್ ತೆರವಾದರೂ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಇಂದು ನಗರದಲ್ಲಿ ಜನ ಮತ್ತು ವಾಹನಗಳ ಓಡಾಟ ತೀರಾ ಕಡಿಮೆ ಇತ್ತು.