
ಕಲಬುರಗಿ :ಏ.12: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಬುರ್ಗಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ವ್ಯಾಪಕ ಜಾಗೃತಿ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು “ಕಲ್ಬುರ್ಗಿ ಮಿಷನ್ 75 ” ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಕಲ್ಬುರ್ಗಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕರಾದ ಡಾ. ಗಿರೀಶ್ ಬದೋಲೆ ತಿಳಿಸಿದರು.
ಕಲ್ಬುರ್ಗಿ ಆಕಾಶವಾಣಿಯ “ಜೊತೆ ಜೊತೆಯಲಿ” ನೇರ ಫೋನ್ ಇನ್ ಸಂವಾದದಲ್ಲಿ ಏಪ್ರಿಲ್ 12 ರಂದು ಭಾಗವಹಿಸಿ ಮಾತನಾಡಿದ ಅವರು ಅತ್ಯಂತ ಕಡಿಮೆ ಮತದಾನದ ಜಿಲ್ಲೆಗಳಲ್ಲಿ ಬೆಂಗಳೂರನ್ನು ಹೊರತುಪಡಿಸಿದರೆ ನಂತರದ ಸ್ಥಾನ ಕಲ್ಬುರ್ಗಿಯದ್ದಾಗಿದ್ದು ಕಳೆದ ಬಾರಿ ಶೇಕಡಾ 62.6 ರಷ್ಟು ಮತದಾನ ದಾಖಲಾಗಿದೆ. ಇದಕ್ಕಾಗಿ ಈ ಬಾರಿ ಸ್ವೀಪ್ ಸಮಿತಿಯಿಂದ ಬೈಕ್ ,ಟಾಂಗ ಮೆರವಣಿಗೆ, ವಿಶೇಷ ಚೇತನರ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಕ್ಯಾಂಡಲ್ ಮೆರವಣಿಗೆ “ನಾನು ಮತ ಹಾಕುತ್ತೇನೆ” ಮನೆ ಮನೆಗೆ ವಿಶೇಷ ಅಭಿಯಾನ, ಮಕ್ಕಳು ಪೋಷಕರಿಗೆ ಪತ್ರಲೇಖನ, ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರಿಂದ ಈ ಬಾರಿ ಶೇಕಡ 80ರಷ್ಟು ಮತದಾನ ಗುರಿ ಹೊಂದಲಾಗಿದೆ. ಪ್ರತಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಸಕಿ ಮತಗಟ್ಟೆ ಇದ್ದು ಇಲ್ಲಿ ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಲಿದ್ದಾರೆ ಹಾಗೂ ವಿಶೇಷ ಚೇತನರ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು ಇದರಲ್ಲಿ ವಿಶೇಷ ಚೇತನರು ಸಿಬ್ಬಂದಿಗಳಾಗಿರುತ್ತಾರೆ. ಹಾಗೂ ಪ್ರತಿ ಮತಕ್ಷೇತ್ರದಲ್ಲಿರುವ ವಿಶೇಷತೆಗಳನ್ನು ಬಿಂಬಿಸುವ ಧ್ಯೇಯ ಹೊಂದಿದ ಮತಗಟ್ಟೆ (ಥೀಮ್ ಬೇಸ್ಡ್ ಬೂತ್) ಆರಂಭಿಸಲಾಗಿದ್ದು ಇದರಲ್ಲಿ ಭೀಮ ನದಿಯ ವೈಶಿಷ್ಟ್ಯ, ತೊಗರಿ ವಿಶೇಷತೆ ,ಸಿಮೆಂಟ್ ,ವನ್ಯಧಾಮದ ವಿಶೇಷತೆ ಒಳಗೊಂಡ ಆಯಾಯ ತಾಲೂಕುಗಳ ವೈಶಿಷ್ಟ್ಯತೆಯನ್ನು ಬಿಂಬಿಸಲಾಗುವುದು ಎಂದರು.
ಮತದಾನದಲ್ಲಿ ನಗರ ಪ್ರದೇಶದವರು ಗ್ರಾಮೀಣ ಪ್ರದೇಶಕ್ಕಿಂತ ಕಡಿಮೆ ಉತ್ಸಾಹ ತೋರುತ್ತಿದ್ದು ಮತದಾನ ಹೆಚ್ಚಳಕ್ಕೆ ಮತಗಟ್ಟೆಯಲ್ಲಿ ವ್ಯಾಪಕ ವ್ಯವಸ್ಥೆ ಕೈಗೊಳ್ಳಲಾಗಿದೆ ಕನಿಷ್ಠ ಒಂದು ವರೆ ಸಾವಿರ ಮತದಾರರಿಗೆ ಒಂದು ಮತಗಟ್ಟೆ, ವಿಶೇಷ ಚೇತನರಿಗೆ ರಾಂಪ್ ನ ವ್ಯವಸ್ಥೆ ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ನೆರಳಿನ ವ್ಯವಸ್ಥೆ ಕಾಯಲು ಕೋಣೆಯ ವ್ಯವಸ್ಥೆ ಮತದಾರರಿಗೆ ನೀಡಲು ಹೆಲ್ಪ್ ಡೆಸ್ಕ್ ಹಾಗೂ ಗರ್ಭಿಣಿಯರಿಗೆ ಮಹಿಳೆಯರಿಗೆ ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ ಇದರಿಂದಾಗಿ ಮತದಾನಕ್ಕೆ ಸಮಯ ತಗಲದೆ ಕ್ಷೀಪ್ರವಾಗಿ ಮತಗಟ್ಟೆಯಿಂದ ತೆರಳಬಹುದು ಎಂದು ಹೇಳಿದರು ಇದರೊಂದಿಗೆ ಅಂದತ್ವ ಸಮಸ್ಯೆ ಹೊಂದಿದವರಿಗೆ ಮ್ಯಾಗ್ನಿಫೈ ಗ್ಲಾಸ್, ಬ್ರೈಲ್ ಲಿಪಿ ಮತ್ತು ಕಿವುಡುತನದವರಿಗೆ ಕೇಳಲು ವ್ಯವಸ್ಥೆ ಜೊತೆಗೆ ಮತಯಂತ್ರವನ್ನು ಕಲ್ಪಿಸಲಾಗುತ್ತಿದ್ದು ಇದರಿಂದ ಅನುಕೂಲವಾಗಲಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರು ಸಲಹೆಗಳನ್ನು ಸಿ¬-ವಿಜಿಲ್, ಸಕ್ಷಮ ಆಪ್ ಮತ್ತು ಸಹಾಯವಾಣಿ ದೂರವಾಣಿ 1950 ಬಳಸಿಕೊಂಡು ಮುಕ್ತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮತ್ತು ವಿಶೇಷ ಚೇತನರಾದ ಕಾಸಿಂಸಾಬ್ ಹಾಗೂ ಚಿತ್ರ ನಟಿ ಮೇಘನಾ ಗಾಔವ್ಕರ್ ಇವರು ಮತದಾನ ಹೆಚ್ಚಳಕ್ಕಾಗಿ ವಿಶೇಷ ಪ್ರಚಾರ ಆಂದೋಲನ ಕೈಗೊಳ್ಳಲಿದ್ದಾರೆ ಎಂದರು.
ಫೋನ್ ಇನ್ ಸಂವಾದದಲ್ಲಿ ವಿಜಯಪುರದ ಮುದುಕಪ್ಪ, ಸುರಪುರದ ರಾಘವೇಂದ್ರ ಬಕ್ರಿ, ಗೋಗಿಯ ಬಸಣ್ಣ, ತಿಲಕ ನಗರದ ಭೀಮಸೇನ್ ರಾವ್ ಕುಲಕರ್ಣಿ, ಸುಲೇಪೇಟೆಯ ಬಸವರಾಜ್, ಪಾಂಚಾಳ್ , ಅಫಜಲ್ಪುರದ ಸಿದ್ದರಾಮ ಕಂಬಾರ, ಕಾಳಗಿಯ ನಾಗಣ್ಣ ಮಲ್ಲಿಕಾರ್ಜುನ ಮಂಗಾಣೆ, ಯಾದಗಿರಿಯ ಶರಣಬಸಪ್ಪ ಆದವರು ಸಂವಾದ ನಡೆಸಿದರು. ಈ ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಲಕ್ಷ್ಮಿಕಾಂತ್ ಪಾಟೀಲ್ ನೆರವಾದರು. ಅನುಷ ಡಿ.ಕೆ ಮತ್ತು ಅನಿಲ್ ಕುಮಾರ್ ತಾಂತ್ರಿಕ ನೆರವು ನೀಡಿದರು.