ಕಲಬುರಗಿ–ಮಂಗಳೂರು ವಿಮಾನ ಸೇವೆ ಆರಂಭಕ್ಕೆ ಕೇಂದ್ರ ಸಚಿವರಿಗೆ ನಳಿನ್ ಆಗ್ರಹ

ಕಲಬುರಗಿ.ಮಾ.24:ಕಲಬುರಗಿ ಮತ್ತು ಮಂಗಳೂರು ಮಧ್ಯೆ ಬೆಂಗಳೂರು ದಾರಿಯಾಗಿ ವಿಮಾನ ಸೇವೆ ಪ್ರಾಂರಭಿಸುವಂತೆ ಕೇಂದ್ರದ ನಾಗರಿಕ ವಿಮಾನ ಯಾನ ಖಾತೆಯ ಸಚಿವರಾದ ಹರ್‍ದೀಪ್ ಸಿಂಗ್ ಪುರಿ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಮಂಗಳೂರಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕಲಬುರಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಸದಾನಂದ ಪೆರ್ಲ ಸಲ್ಲಿಸಿದ ಮನವಿಗೆ ಸ್ಪಂದಿಸಿದ ನಳಿನ್‍ಕುಮಾರ್ ಕಟೀಲ್ ಅವರು ಕೇಂದ್ರ ಸಚಿವರಿಗೆ ಈ ಪತ್ರ ಬರೆದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜನರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ನೂರಾರು ಜನರು ಕರಾವಳಿ ಜಿಲ್ಲೆಗಳಿಗೆ ಶಿಕ್ಷಣ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಪ್ರವಾಸಿ ಕೇಂದ್ರಗಳಿಗೆ ನಿರಂತರ ಪ್ರಯಾಣ ಮಾಡುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಭೂಕುಸಿತ ಮತ್ತು ರಸ್ತೆಗಳ ದುಸ್ಥಿತಿಯಿಂದ ರಸ್ತೆ ಹಾಗೂ ರೈಲು ದಾರಿಯಾಗಿ ಸಂಚಾರ ಕಷ್ಟಸಾಧ್ಯವಾಗಿದ್ದು ಸುಗಮ ಸಂಚಾರದ ದೃಷ್ಟಿಯಿಂದ ಕಲಬುರಗಿಯಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಮಾನ ಯಾನ ಪ್ರಾರಂಭಿಸಿ ಅನುಕೂಲ ಕಲ್ಪಿಸಬೇಕು. ಪ್ರವಾಸೋದ್ಯಮ, ವಾಣಿಜೋಧ್ಯಮ, ಶಿಕ್ಷಣ ರಂಗದ ಉತ್ತೇಜನಕ್ಕಾಗಿ ಈ ಎರಡು ನಗರಗಳ ಮಧ್ಯೆ ವಿಮಾನ ಯಾನ ತುರ್ತು ಅಗತ್ಯವಾಗಿದೆ ಎಂದು ಕೇಂದ್ರ ವಿಮಾನ ಯಾನ ಖಾತೆ ಸಚಿವರಿಗೆ ನಳಿನ್ ಕುಮಾರ್ ಒತ್ತಾಯಿಸಿದ್ದಾರೆ.
ಕೃತಜ್ಞತೆ :
ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆದು ಕಲ್ಯಾಣ ಕರ್ನಾಟಕ ಭಾಗದ ಜನರ ಬೇಡಿಕೆಗೆ ಸ್ಪಂದಿಸಿರುವುದಕ್ಕೆ ಕಲಬುರಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸ್ಟಾರ್ ಏರ್‍ಲೈನ್ಸ್ ಸಂಸ್ಥೆಯವರಿಗೆ ಹಾಗೂ ಕಲಬುರಗಿ ಸಂಸದರಿಗೂ ಮನವಿ ಪತ್ರ ಸಲ್ಲಿಸಿ ಶೀಘ್ರದಲ್ಲೇ ಕಲಬುರಗಿ ಮಂಗಳೂರು ನಡುವೆ ವಿಮಾನ ಯಾನ ಪ್ರಾರಂಭಿಸುವಂತೆ ಒತ್ತಾಯಿಸಲಾಗಿದೆ. ಕಲಬುರಗಿಯಿಂದ ಈಗಾಗಲೇ ಸುಮಾರು 10 ಬಸ್‍ಗಳು ಮಂಗಳೂರಿಗೆ ನಿತ್ಯ ಸಂಚರಿಸುತ್ತಿದ್ದು ಪ್ರಯಾಣಿಕರ ತೀವ್ರ ದಟ್ಟಣೆ ಕಂಡು ಬರುತ್ತಿದೆ. ಬಸ್ ಪ್ರಯಾಣದಿಂದ 14 ಗಂಟೆಗಳ ಅವದಿ ತಗಲುತ್ತಿದೆ. ವಿಮಾನ ಯಾನ ಆರಂಭಗೊಂಡಲ್ಲಿ ಕೇವಲ ಎರಡುವರೆ ಗಂಟೆಯಲ್ಲಿ ಮಂಗಳೂರು ತಲುಪುವುದರೊಂದಿಗೆ ಸಮಯ ಉಳಿತಾಯವಾಗಲಿದೆ. ಬೆಂಗಳೂರು ಒನ್ ಸ್ಟಾಪ್ ಸೌಲಭ್ಯ ನೀಡಿ ವಿಮಾನ ಸಂಚಾರ ಆರಂಭಗೊಂಡರೆ ಪ್ರಯಾಣಿಕರಿಗೆ ಕಲಬುರಗಿಯಿಂದ ಬೆಂಗಳೂರಿಗೂ ಅಲ್ಲಿಂದ ಮಂಗಳೂರಿಗೂ ಸಂಚರಿಸಲು ಅನುಕೂಲವಾಗಲಿದೆ. ಈ ಬಗ್ಗೆ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಅಮರನಾಥ ಪಾಟೀಲ್ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಗಮನ ಸೆಳೆದಿರುವುದನ್ನು ಇಲ್ಲಿ ಸ್ಮರಿಸಬಹುದು ಎಂದು ಪೆರ್ಲ ತಿಳಿಸಿದ್ದಾರೆÉ.
ಮುಂಬೈ-ಕಲಬುರಗಿ ನಡುವೆ ಮಾ.25ರಿಂದ ವಿಮಾನ ಸೇವೆ ಆರಂಭವಾಗುತ್ತಿದ್ದು ಕೂಡಲೇ ಮಂಗಳೂರು ಕೇಂದ್ರವಾಗಿರಿಸಿ ವಿಮಾನ ಸೇವೆ ಪ್ರಾರಂಭವಾಗಲಿ ಎಂದು ಒತ್ತಾಯಿಸಿದ್ದಾರೆ.