ಕಲಬುರಗಿ-ಬೆಂಗಳೂರು ಹೊಸ ರೈಲು ಕಾಲಮಿತಿಯಲ್ಲಿ ಮಾಡದಿದ್ದರೆ ಹೋರಾಟ: ದಸ್ತಿ ಎಚ್ಚರಿಕೆ

ಕಲಬುರಗಿ,ಜೂ.19: ಕಲಬುರಗಿಯಿಂದ ಬೆಂಗಳೂರಿಗೆ ಹೊಸ ರೈಲು ಕಾಲಮಿತಿಯಲ್ಲಿ ಪ್ರಾರಂಭಿಸಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ಒತ್ತಾಯಿಸಿದರು.
ನಗರದ ರೈಲು ನಿಲ್ದಾಣದ ವ್ಯವಸ್ಥಾಪಕರ ಮೂಲಕ ಮುಂಬಯಿ ವಲಯದ ಜನರಲ್ ಮ್ಯಾನೇಜರ್ ಅವರಿಗೆ ನಿಯೋಗದ ನೇತೃತ್ವ ವಹಿಸಿ ಮನವಿ ಪತ್ರ ಸಲ್ಲಿಸಿದ ಅವರು, ಕಲಬುರ್ಗಿಯಿಂದ ಪ್ರತಿ ತಿಂಗಳಿಗೆ ಸುಮಾರು 2 ಲಕ್ಷ ಜನ ರಾಜಧಾನಿ ಬೆಂಗಳೂರಿಗೆ ಪ್ರವಾಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮುಂಬೈ ವಲಯ ಕಚೇರಿ ಮತ್ತು ಸೊಲಾಪೂರ್ ವಿಭಾಗೀಯ ಕಚೇರಿ, ಕಲಬುರ್ಗಿಯಿಂದ ಹೊಸದಾಗಿ ರೈಲು ಪ್ರಾರಂಭಿಸುವ ಬಗ್ಗೆ ಕಿಂಚಿತ್ತೂ ಲಕ್ಷಕ್ಕೆ ತೆಗೆದುಕೊಳ್ಳದೇ, ಮಲತಾಯಿ ಧೋರಣೆ ಮಾಡುತ್ತಿರುವುದು ಖಂದನೀಯವಾಗಿದೆ ಎಂದು ಆಕ್ಷೇಪಿಸಿದರು.
ಆದಷ್ಟು ಶೀಘ್ರ ಕಲಬುರ್ಗಿಯಿಂದ ಬೆಂಗಳೂರಿಗೆ ಮತ್ತು ಬೀದರ್ ಮಾರ್ಗವಾಗಿ ಕಲಬುರಗಿ ಮೂಲಕ ಯಾದಗಿರಿ, ರಾಯಚೂರು ಮುಖಾಂತರ ಬೆಂಗಳೂರಿಗೆ ಹೊಸ ರೈಲುಗಳು ಕಾಲಮಿತಿಯಲ್ಲಿ ಮಾಡದಿದ್ದರೆ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ನಗರದ ರೈಲು ನಿಲ್ದಾಣದ ಎದುರು ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಅದೇ ರೀತಿ ಸಮಿತಿ ವತಿಯಿಂದ ಸಿಕಿಂದ್ರಾಬಾದ್ ವಲಯಕ್ಕೆ ಪತ್ರ ಬರೆದು, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಮಾರ್ಗವಾಗಿ ಹೊಸ ರೈಲು ಆರಂಭಿಸಲು ಒತ್ತಾಯಿಸಲಾಗಿದೆ. ಒಟ್ಟಾರೆ, ಬೀದರದಿಂದ ಮತ್ತು ಕಲಬುರ್ಗಿಯಿಂದ ಎರಡು ಹೊಸ ರೈಲುಗಳು ಬೆಂಗಳೂರಿಗೆ ತುರ್ತಾಗಿ ಪ್ರಾರಂಭಿಸಿ ಈ ಭಾಗದ ಜನರ ಬೇಡಿಕೆಗೆ ಗಂಭೀರವಾಗಿ ಸ್ಪಂಧಿಸಿ ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಡಾ. ಮಾಜಿದ್ ದಾಗಿ, ಕಲ್ಯಾಣರಾವ್ ಪಾಟೀಲ್, ಅಸ್ಲಂ ಚೌಂಗೆ, ಶಿವಾನಂದ್ ಕಾಂದೆ, ಸಂಧ್ಯಾರಾಜ್ ಸ್ಯಾಮ್ಯೂವೆಲ್, ಸಾಜಿದ್ ಅಲಿ ರಂಜೋಲಿ, ಸಂತೋಷ್ ಜವಳಿ, ಮಹ್ಮದ್ ಗೌಸ್, ಶರಣಬಸಪ್ಪ ಕುರಿಕೋಟಾ, ರಾಜು ಜೈನ್, ಶಿವಾನಂದ್ ಬಿ., ಬಾಬಾ ಫಕ್ರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.