ಕಲಬುರಗಿ-ಬೆಂಗಳೂರು, ಬೀದರ್-ಬೆಂಗಳೂರು ನಡುವೆ ಮೂರು ನೂತನ ರೈಲು ಓಡಿಸಲು ಖರ್ಗೆ ಒತ್ತಾಯ

ಕಲಬುರಗಿ,ಮೇ.26-ಕಲಬುರಗಿ ಮತ್ತು ಬೆಂಗಳೂರು ನಡುವೆ ಎರಡು ನೂತನ ರೈಲುಗಳು ಹಾಗೂ ಬೀದರ್ ಮತ್ತು ಬೆಂಗಳೂರು ನಡುವೆ ಒಂದು ನೂತನ ರೈಲು ಓಡಿಸುವಂತೆ ಆಗ್ರಹಿಸಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.
ಕಲಬುರಗಿ ಬೆಂಗಳೂರು ಹಾಗೂ ಬೀದರ್ ಬೆಂಗಳೂರು ನಡುವಿನ ಪ್ರಯಾಣಿಕರ ದಟ್ಟಣೆಯ ಕುರಿತಂತೆ ವಿಸ್ತಾರವಾಗಿ ವಿವರಿಸಿರುವ ಖರ್ಗೆ ಅವರು, ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿನಿತ್ಯ ಸುಮಾರು 6000 ಪ್ರಯಾಣಿಕರು ಸಂಚರಿಸುತ್ತಿದ್ದು, ಅವರಲ್ಲಿ ಬಹುತೇಕ ವಲಸೆ ಕೂಲಿ ಕಾರ್ಮಿಕರಾಗಿದ್ದಾರೆ. ಮೀಸಲು ಬೋಗಿಗಳಲ್ಲಿ ಆಸನ ಕಾಯ್ದಿರಿಸಲು ಹಣಕಾಸಿನ ದೃಷ್ಠಿಯಿಂದ ಅವರ ಶಕ್ತಿಗೆ ಮೀರಿದ್ದಾಗಿದೆ. ಹಾಗಾಗಿ ಅವರು ಜನರಲ್ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದ್ದು, ಪ್ರಯಾಣಿಕರು ಆಸನದ ಕೊರತೆಯಿಂದಾಗಿ ಹಾಸಲು ಮೇಲೆ ಮಲಗಿಕೊಂಡು ಪ್ರಯಾಣಿಸುತ್ತಿದ್ದಾರೆ. ಇದು ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ ಎಂದು ಕೇಂದ್ರ ರೈಲ್ವೆ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಕಲಬುರಗಿ ಹಾಗೂ ಬೆಂಗಳೂರು ನಡುವೆ ಪ್ರತಿನಿತ್ಯ ಐದು ರೈಲುಗಳು ಸಂಚರಿಸುತ್ತಿವೆ. ಅವುಗಳೆಂದರೆ, ಉದ್ಯಾನ ಎಕ್ಸ್ ಪ್ರೆಸ್, ಕರ್ನಾಟಕ ಎಕ್ಸ್‍ಪ್ರೆಸ್, ಬಸವ ಎಕ್ಸ್‍ಪ್ರೆಸ್, ಸೋಲಾಪುರ-ಹಾಸನ ಎಕ್ಸ್‍ಪ್ರೆಸ್ ಮತ್ತು ಕೊಯಮತ್ತೂರು ಎಕ್ಸ್‍ಪ್ರೆಸ್. ಇದರ ಜೊತೆಗೆ ವಾರಕ್ಕೊಮ್ಮೆ ಕೆಲ ರೈಲುಗಳು ಸಂಚರಿಸುತ್ತಿವೆ ಅವುಗಳೆಂದರೆ, ನಾಗರಕೋಯಿಲ್ ಎಕ್ಸ್‍ಪ್ರೆಸ್, ತುತೂಕುಡಿ ವಿವೇಕ ಎಕ್ಸ್‍ಪ್ರೆಸ್, ತಿರುವನಂತಪುರಂ ಸೆಂಟ್ರಲ್ ಎಕ್ಸ್‍ಪ್ರೆಸ್, ಎಂಜಿಆರ್ ಚೆನ್ನೈ ಎಕ್ಸ್‍ಪ್ರೆಸ್, ತಿರುವನಂತಪುರಂ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ಹಾಗೂ ಯಶವಂತಪುರ ಸುವಿಧಾ ಎಕ್ಸ್‍ಪ್ರೆಸ್ ಮತ್ತೆ ಮೈಸೂರು ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ವಾರದಲ್ಲಿ ಎರಡು ದಿನ ಸಂಚರಿಸುತ್ತದೆ. ಪ್ರಮುಖವಾಗಿ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಈ ಎಲ್ಲ ರೈಲುಗಳ ಬೋಗಿಗಳನ್ನು ಕಡಿತಗೊಳಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು ಪುನಃ ಕಡಿತಗೊಳಿಸಲಾದ ಬೋಗಿಗಳನ್ನು ಆಯಾ ರೈಲುಗಳಿಗೆ ಜೋಡಿಸುವುದು ಅತಿ ಅವಶ್ಯಕವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ವಾಸ್ತವಾಂಶ ಏನೆಂದರೆ, ಬೀದರ್ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಈ ಎರಡು ನಗರಗಳಿಗೆ ನಿಗದಿಪಡಿಸಿದ ಮೀಸಲಿಸಿರುವ ಆಸನಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕಲಬುರಗಿ- ಬೆಂಗಳೂರು ನಡುವೆ ಎರಡು ನೂತನ ರೈಲುಗಳು ಹಾಗೂ ಬೀದರ್-ಬೆಂಗಳೂರು ನಡುವೆ ಒಂದು ನೂತನ ರೈಲು ಓಡಿಸುವ ಅವಶ್ಯಕತೆ ಇದ್ದು ಇದರಿಂದ ಜನಸಂದಣಿ ಕಡಿಮೆಯಾಗುವುದರ ಜೊತೆಗೆ ಪ್ರಯಾಣಿಕರು ಎದುರಿಸುತ್ತಿರುವ ಅನಾನುಕೂಲತೆ ಕಡಿಮೆಯಾಗಲಿದೆ. ಹಾಗಾಗಿ, ಮೇಲೆ ಹೆಸರಿಸಿರುವಂತೆ ನೂತನ ರೈಲುಗಳ ಓಡಾಟಕ್ಕೆ ಕ್ರಮ ಕೈಗೊಳ್ಳಲು ಅಗತ್ಯ ಸೂಚನೆ ನೀಡುವಂತೆ ರೈಲ್ವೆ ಸಚಿವರಲ್ಲಿ ಪತ್ರದ ಮೂಲಕ ಖರ್ಗೆ ಕೋರಿದ್ದಾರೆ.