ಕಲಬುರಗಿ-ಬೀದರ್ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ; ಇಬ್ಬರಿಗೆ ಗಾಯ

ಕಲಬುರಗಿ,ಜು.9-ಕಲಬುರಗಿ-ಬೀದರ್ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಸುಲ್ತಾನಪುರ ರೈಲ್ವೆ ನಿಲ್ದಾಣದ ಬಳಿ ನಿನ್ನೆ ನಡೆದಿದೆ.
ಘಟನೆಯಲ್ಲಿ ಆಶಾ ಕಾರ್ಯಕರ್ತೆಯಾಗಿರುವ ಸುಮಿತ್ರಾ ಎಂಬವರು ಸೇರಿದಂತೆ ಇಬ್ಬರಿಗೆ ಗಾಯವಾಗಿದೆ. ಸುಮಿತ್ರಾ ಅವರ ಕತ್ತಿನ ಭಾಗಕ್ಕೆ ಗಾಯವಾಗಿದ್ದು, ಸಹ ಪ್ರಯಾಣಿಕರಿಂದ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇನ್ನೊಬ್ಬ ಪ್ರಯಾಣಿಕರ ಹೆಸರು ತಿಳಿದುಬಂದಿಲ್ಲ. ರೈಲು ಸುಲ್ತಾನಪುರ ಸ್ಟೇಷನ್ ದಾಟುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಪ್ರಯಾಣಿಕರಿಗೆ ಕಲ್ಲೇಟು ಬಿದ್ದಿದೆ. ಇದರಿಂದ ರೈಲಿನಲ್ಲಿದ್ದ ಸಹ ಪ್ರಯಾಣಿಕರು ಕೆಲ ಕಾಲ ಭಯ, ಆತಂಕಕ್ಕೆ ಈಡಾಗಿದ್ದರು. ಕಲ್ಲು ತೂರಾಟ ನಡೆಸಿದವರು ಯಾರು, ಯಾವ ಕಾರಣಕ್ಕಾಗಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬುವುದರ ಕುರಿತು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.