ಕಲಬುರಗಿ: ಬಿಸಿಲ ಜೊತೆ ಬಸ್‍ಮುಷ್ಕರದ ಬಿಸಿ

ಕಲಬುರಗಿ ಏ 7: ಏಪ್ರಿಲ್ ಬಿಸಿಲ ತಾಪದೊಂದಿಗೆ, ಸಾರಿಗೆ ನೌಕರರ ಮುಷ್ಕರದ ಬಿಸಿಯೂ ಕಲಬುರಗಿಗೆ ತಟ್ಟಿದೆ.
ಆರನೆಯ ವೇತನ ಆಯೋಗದ ಶಿಫಾರಸ್ಸು ಅನ್ವಯ ವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆಯನ್ನಿಟ್ಟುಕೊಂಡು ಸಾರಿಗೆ ನೌಕರರ ಕೂಟ ಮುಷ್ಕರಕ್ಕೆ ಕರೆ ನೀಡಿದೆ. ಇದರ ಪರಿಣಾಮ ಸದಾ ಚಟುವಟಿಕೆಯಿಂದಿರುತ್ತಿದ್ದ ಕಲಬುರಗಿ ಕೇಂದ್ರ ಬಸ್ ನಿಲ್ದಾಣ ಇಂದು ಬಸ್‍ಗಳು ಇಲ್ಲದೇ ಬಿಕೋ ಎನ್ನುತ್ತಿದೆ.ಬಸ್ ನಿಲ್ದಾಣದಲ್ಲಿ ಎಲ್ಲೆಲ್ಲೂ ಪೊಲೀಸರೇ ಕಾಣಿಸುತ್ತಿದ್ದು,ಅಲ್ಲೊಬ್ಬ ಪ್ರಯಾಣಿಕರು ಹಣೆಗೆ ಕೈ ಹಚ್ಚಿಕೊಂಡು ಬಸ್ಸಿಗಾಗಿ ಕಾಯುತ್ತ ಕೂತಿದ್ದಾರೆ.ಅಗತ್ಯ ಕಾರ್ಯಕ್ರಮಕ್ಕಾಗಿ ಜೇವರಗಿಗೆ ಹೋಗಲು ಕುಟುಂಬದೊಂದಿಗೆ ತಯಾರಾಗಿ ಬಂದ ಮಹೇಶ ಸಜ್ಜನ ಎಂಬುವವರು ಬಸ್ ಮುಷ್ಕರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಖಾಸಗಿ ವಾಹನದಲ್ಲಿ ತೆರಳಲು ದುಬಾರಿ ಹಣ ಕೊಡಬೇಕಾಗುತ್ತದೆ ಎಂದು ಅಹಾಯಕತೆ ವ್ಯಕ್ತಪಡಿಸಿದರು.
ಬೆಂಬಲ:
ಸಾರಿಗೆ ನೌಕರರ ಮುಷ್ಕರಕ್ಕೆ ಶ್ರಮಜೀವಿಗಳ ವೇದಿಕೆ ಬೆಂಬಲ ವ್ಯಕ್ತ ಪಡಿಸಿದೆ.ಡಿಸೆಂಬರ್ ನಲ್ಲಿ ಮುಷ್ಕರ ನಡೆಸಿದ್ದಾಗ ನೌಕರರ ಬೇಡಿಕೆಗಳನ್ನು ಈಡೇರಿಸುವದಾಗಿ ಸರಕಾರ ಹೇಳಿತ್ತು.ಆದರೆ 6 ನೆಯ ವೇತನ ಆಯೋಗದ ಶಿಫಾರಸ್ಸು ಜಾರಿ ಹೊರತು ಪಡಿಸಿ ಉಳಿದ ಬೇಡಿಕೆಗಳಿಗೆ ಸ್ಪಂದಿಸಿರುವದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳುತ್ತಿದ್ದಾರೆ.ವಾಸ್ತವವಾಗಿ ಯಾವ ಬೇಡಿಕೆಗೂ ಸ್ಪಂದಿಸಿಲ್ಲ.ಹೀಗಾಗಿ ಮತ್ತೆ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಹೇಳಿದ್ದಾರೆ.
ಮುಷ್ಕರ ನಡೆಸಿದರೆ ಎಸ್ಮಾ ಕಾಯಿದೆ ಜಾರಿಗೆ ಮುಂದಾಗುತ್ತೇವೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ ಕಠೋರವಾಗಿ ಎಚ್ಚರಿಕೆ ನೀಡಿದ್ದಾರೆ
ಪರ್ಯಾಯ ವ್ಯವಸ್ಥೆ:
ಮುಷ್ಕರ ನಡೆದರೆ ಖಾಸಗಿ ವಾಹನಗಳನ್ನು ಬಳಸಲಾಗುವದು ಎಂದು ಸರಕಾರ ಹೇಳಿತ್ತು. ಕಲಬುರಗಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಖಾಸಗಿ ಬಸ್ಸೊಂದು ಪ್ರಯಾಣಿಕರಿಗಾಗಿ ಕಾಯುತ್ತ ನಿಂತಿತ್ತು. ನಗರ ಹೊರವಲಯದಿಂದ ಖಾಸಗಿ ವಾಹನಗಳು ವಿವಿಧ ತಾಲೂಕು ಕೇಂದ್ರಗಳಿಗೆ ಸಂಚರಿಸುತ್ತಿದ್ದು,ಕೇಂದ್ರ ಬಸ್ ನಿಲ್ದಾಣದಿಂದ ಆಯಾ ಸ್ಥಳ ತಲುಪಲು ಆಟೋದವರು ದುಬಾರಿ ದರ ಕೇಳುತ್ತಿರುವದು ಕಂಡು ಬಂದಿತು.