
ಕಲಬುರಗಿ:ಜು.12: ಮುಂಗಾರು ಮಳೆ ವಿಫಲವಾಗಿದ್ದರಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರವು ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ಒಂದು ವಾರದಲ್ಲಿ ಘೋಷಣೆ ಮಾಡದೇ ಹೋದಲ್ಲಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ್ ಪಾಟೀಲ್ ಕಮಲಾಪುರ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆ ವಿಫಲವಾಗಿದ್ದರಿಂದ ಉದ್ದು, ಹೆಸರು ಮುಂತಾದ ಬೆಳೆಗಳನ್ನು ಬೆಳೆಯಲಾಗದೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಾಡಿಕೆಯ ಮಳೆಯಾಗದೇ ಕೇವಲ ಅರ್ಧದಷ್ಟು ಮಳೆಯಾಗಿದ್ದು, ಜಮೀನುಗಳು ಬೆಳೆ ಇಲ್ಲದೇ ಬರ ಬಿದ್ದಿವೆ ಎಂದು ಕಳವಳ ವ್ಯಕ್ತಪಡಿಸಿದರು.
ವಾಡಿಕೆಯಂತೆ ಜಿಲ್ಲೆಯಲ್ಲಿ 149 ಮಿ.ಮೀ. ಮಳೆ ಆಗಬೇಕಿತ್ತು. ಆದಾಗ್ಯೂ, ಇದುವರೆಗೆ ಕೇವಲ 96 ಮಿ,ಮೀ. ಮಳೆಯಾಗಿದೆ. ಇನ್ನು 36 ಮಿ.ಮೀ. ಮಳೆಯ ಅಭಾವ ಇದೆ. ಶೇಕಡಾ 65ರಷ್ಟು ಸಹ ಬಿತ್ತನೆಯಾಗಿಲ್ಲ. ಹೀಗಾಗಿ ಸರ್ಕಾರವು ಈಗಾಗಲೇ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಹಾಗಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಮತ್ತು ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸರ್ಕಾರದ ಮೇಲೆ ಒತ್ತಡ ತಂದು ಕೂಡಲೇ ಜಿಲ್ಲೆಯನ್ಮು ಬರ ಜಿಲ್ಲೆಯೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಾನುವಾರಗಳಿಗಾಗಿ ಗ್ರಾಮ ಪಂಚಾಯಿತಿಗೆ ಒಂದು ಗೋಶಾಲೆಯನ್ನು ಸ್ಥಾಪಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬರ ಘೋಷಣೆಯಡಿ ರೈತರಿಗೆ ಸೂಕ್ತ ಪರಿಹರವನ್ನು ಕೊಡಬೇಕು ಎಂದು ಅವರು ಆಗ್ರಹಿಸಿದರು.
ಹಿಂದಿನ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿನ ಬಿಜೆಪಿ ಸರ್ಕಾರವು ಹತ್ತು ಹಲವು ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ರೈತರಿಗಾಗಿ ಜಾರಿಗೆ ತಂದಿತ್ತು. ಆದಾಗ್ಯೂ, ಪ್ರಸ್ತುತ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿನ ಸರ್ಕಾರವು ಆ ಎಲ್ಲ ರೈತ ಪರ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ರೈತರಿಗೆ 6000ರೂ.ಗಳ ಸಹಾಯಧನವನ್ನು ಕೊಡುತ್ತಿತ್ತು. ಹಾಗೆಯೇ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿನ ಬಿಜೆಪಿ ಸರ್ಕಾರವು 4000ರೂ.ಗಳ ಸಹಾಯಧನ ಒದಗಿಸುವ ಮೂಲಕ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ ಒಟ್ಟು ಹತ್ತು ಸಾವಿರ ರೂ.ಗಳನ್ನು ಕೊಡುತ್ತಿತ್ತು. ಆದಾಗ್ಯೂ, ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರವು 4000ರೂ.ಗಳ ರಾಜ್ಯದ ಸಹಾಯಧನವನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಆ ಸಹಾಯಧನವನ್ನು ಮುಂದುವರೆಸಬೇಕು ಎಂದು ಅವರು ಒತ್ತಾಯಿಸಿದರು.
ಬೊಮ್ಮಾಯಿ ಅವರ ನೇತೃತ್ವದಲ್ಲಿನ ಸರ್ಕಾರವು ವಿದ್ಯಾಸಿರಿ ಎಂಬ ಯೋಜನೆಯನ್ನು ರೈತರ ಮಕ್ಕಳಿಗಾಗಿ ಜಾರಿಗೆ ತಂದಿದ್ದರು. ಅದನ್ನೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರವು ಸ್ಥಗಿತಗೊಳಿಸಿದೆ. ಅದೇ ರೀತಿ ಎಪಿಎಂಸಿ ಕಾಯ್ದೆಯನ್ನು ಸಹ ಹಿಂಪಡೆದಿದೆ. ರೈತ ಸಿರಿ, ರೈತ ಶಕ್ತಿ ಯೋಜನೆ ಸೇರಿದಂತೆ ಎಲ್ಲ ರೈತ ಪರ ಬಿಜೆಪಿ ಸರ್ಕಾರದ ಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದ್ದನ್ನು ಪುನರ್ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕೃಷಿ ಪಂಡಿತ್ ಪ್ರಶಸ್ತಿ ಪುರಸ್ಕøತ ಅಧಿನಾಥ್ ಹೀರಾ, ಶ್ರೀಶೈಲ್ ಪಾಟೀಲ್, ಮಲ್ಲಣ್ಣ ಕುಲಕರ್ಣಿ, ಗಿರೀಶಗೌಡ ಇನಾಂದಾರ್, ಶಿವಕುಮಾರ್ ಪಾಟೀಲ್, ಮಲ್ಲಿನಾಥ್ ಪಾಟೀಲ್, ಅಣವೀರ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.