ಕಲಬುರಗಿ: ಬಂದ್‍ಗೆ ನೀರಸ ಪ್ರತಿಕ್ರಿಯೆ

ಕಲಬುರಗಿ, ಸೆ 29:ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವದನ್ನು ವಿರೋಧಿಸಿ ಹಲವಾರು ಕನ್ನಡ ಪರ,ರೈತಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್ ಕರೆಗೆ ಕಲಬುರಗಿ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೇರೆ ಊರುಗಳಿಗೆ ಸಾಗುವ ಸಾರಿಗೆ ಬಸ್ಸುಗಳು,ನಗರ ಸಾರಿಗೆ ಬಸ್ಸುಗಳು,ಆಟೋಗಳು ಎಂದಿನಂತೆ ಸಂಚರಿಸುತ್ತಿವೆ.ಅಂಗಡಿ ಮುಂಗಟ್ಟು, ಮಾಲ್‍ಗಳು, ಹೊಟೇಲ್‍ಗಳು ತೆರೆದಿವೆ.ಜನಜೀವನ ಸಹಜವಾಗಿದೆ.ಹೀಗಾಗಿ ಬಂದ್‍ನ ಬಿಸಿ ಇಲ್ಲಿ ತಟ್ಟಿಲ್ಲ.
ಇಂದು ಬೆಳಿಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಧರಣಿ ನಡೆಸುತ್ತಿದ್ದ ರೈತ ಸಂಘದ ಕೆಲವು ಮುಖಂಡರನ್ನು ಪೊಲೀಸರು ಬಂಧಿಸಿದರು.
ಬಂದ್‍ಗೆ ಹಲವು ರೈತಪರ, ಕನ್ನಡ ಪರ,ದಲಿತಪರ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ.ಹಲವು ಸಂಘಟನೆಗಳು ಬಂದ್ ನಿಂದ ದೂರ ಉಳಿದಿವೆ.
ಬಂದ್ ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.