ಕಲಬುರಗಿ ನಗರದಲ್ಲಿ 48 ಹೆಲ್ಪ್ ಡೆಸ್ಕ್ ಸ್ಥಾಪಿಸಿ ಡಿ.ಸಿ. ಆದೇಶ

ಕಲಬುರಗಿ.ಏ.20: ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆಯಾದ ನಂತರ ಚಿಕಿತ್ಸೆ, ಆಸ್ಪತ್ರೆ ಮತ್ತು ಹಾಸಿಗೆ ಸ್ಥಿತಿಗತಿಗಳ ಮಾಹಿತಿ ನೀಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬಲು ಜಿಲ್ಲಾಡಳಿತದಿಂದ ಕಲಬುರಗಿ ನಗರದಲ್ಲಿ 48 ಕೋವಿಡ್-19 ಹೆಲ್ಪ್ ಡೆಸ್ಕ್ ಸ್ಥಾಪಿಸಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.

ಇದರಲ್ಲಿ‌ 22 ಸರ್ಕಾರಿ ಮತ್ತು ಖಾಸಗಿ ಅಸ್ಪತ್ರೆಗಳಲ್ಲಿ ಮತ್ತು 26 ಸಾರ್ವಜನಿಕ ಸ್ಥಳದಲ್ಲಿ ಹೆಲ್ಪ್ ಡೆಸ್ಕ್ ಇರಲಿವೆ.

ಮಂಗಳವಾರ ಡಿ.ಸಿ. ಕಚೇರಿ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಸಹಾಯವಾಣಿ ತನ್ನ ಕೆಲಸ ಪ್ರಾರಂಭಿಸಿದ್ದು, ಉಳಿದವು ಬುಧವಾರದಿಂದ ಕಾರ್ಯನಿರ್ವಹಿಸಲಿವೆ.

22 ಆಸ್ಪತ್ರೆಗಳ ವಿವರ: ಜಿಮ್ಸ್, ಇ.ಎಸ್.ಐ. ಆಸ್ಪತ್ರೆ, ಬಸವೇಶ್ವರ ಅಸ್ಪತ್ರೆ, ಕೆ.ಬಿ.ಎನ್. ಆಸ್ಪತ್ರೆ, ಕ್ರಿಸ್ಟಲ್ ಆಸ್ಪತ್ರೆ, ವಾತ್ಸಲ್ಯ ಲೈಫ್ ಆಸ್ಪತ್ರೆ, ಯೂನೈಟೆಡ್ ಆಸ್ಪತ್ರೆ, ಚಿರಾಯೂ ಆಸ್ಪತ್ರೆ, ಆನಂದ‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಎ.ಎಸ್.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಚೈತನ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಸತ್ಯ ಆಸ್ಪತ್ರೆ, ಅನ್ವಿಕಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಸಿದ್ಧಗಂಗಾ ಆಸ್ಪತ್ರೆ, ಧನ್ವಂತರಿ ಆಸ್ಪತ್ರೆ, ಸನರೈಸ್ ಆಸ್ಪತ್ರೆ, ಕಲಬುರಗಿ ಹಾರ್ಟ್ ಫೌಂಡೇಷನ್, ಎಕ್ಸಾನ್ ಆಸ್ಪತ್ರೆ, ಡಾ. ಸರೋಜಿನಿ ಮೋದಿ ಆಸ್ಪತ್ರೆ, ಚಿರಂಜೀವಿ ಆಸ್ಪತ್ರೆ, ಅಲ್ ನೂರ ಆಸ್ಪತ್ರೆ ಹಾಗೂ ಮೋಹನರಾಜ್ ಚಾರಿಟೇಬಲ್ ಆಸ್ಪತ್ರೆ.

26 ಸಾರ್ವಜನಿಕ ಸ್ಥಳಗಳ ವಿವರ:
ಬಸ್ ನಿಲ್ದಾಣ, ರೈಲು ನಿಲ್ದಾಣ, ಮಿನಿ‌ ವಿಧಾನಸೌಧ ಕಚೇರಿ ಆವರಣ, ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಆಳಂದ ಚೆಕ್ ಪೋಸ್ಟ್, ಹುಮನಾಬಾದ ರಿಂಗ್ ರೋಡ್, ಹಿರಾಪುರ್ ಸರ್ಕಲ್, ಶಹಾಬಾದ್ ರಿಂಗ್ ರೋಡ್, ಸಾತ್ ಗುಂಬಜ್ ಪ್ರದೇಶ, ಎಸ್.ಟಿ.ಬಿ.ಟಿ ಪ್ರದೇಶ, ಜಗತ್ ವೃತ್ತ, ಸೇಡಂ ರಿಂಗ್ ರೋಡ್(ಖರ್ಗೆ ಪೆಟ್ರೋಲ್ ಪಂಪ್), ರಾಮಂದಿರ ವೃತ್ತ, ಕಣ್ಣಿ ಮಾರ್ಕೆಟ್, ಲಾಲಗೇರಿ ಕ್ರಾಸ್, ಶಹಾಬಜಾರ್ ನಾಕಾ, ಖಾದ್ರಿ ಚೌಕ್, ಹಾಗರಗಾ ಕ್ರಾಸ್, ಮೋಮಿನಪುರ, ಮಿಜಗುರಿ, ಮುಸ್ಲಿಂ ಚೌಕ್, ಕಾಕಡೆ ಚೌಕ್, ಕೆ.ಬಿ.ಎನ್., ಮಿಸ್ಬಾ ಕಾಲೋನಿ ಹಾಗೂ ಸೋನಿಯಾ ಗಾಂಧಿ ಕಾಲೋನಿ.

ಹೆಲ್ಪ್ ಡೆಸ್ಕ್ ನಲ್ಲಿ ಜನರಿಗೆ ಸರ್ಕಾರಿ ಹಾಗೂ ಖಾಸಗಿ ಕೋವಿಡ್ ಆಸ್ಪತ್ರೆ, ಕೋವಿಡ್ ಪರೀಕ್ಷಾ ಕೇಂದ್ರ, ವ್ಯಾಕ್ಸಿನ್ ಕೇಂದ್ರ, ಪೊಲೀಸ್ ಕಂಟ್ರೋಲ್ ರೂಮ್, ಆರೋಗ್ಯ ಸುರಕ್ಷಾ ಹೆಲ್ಪ್ ಸೆಂಟರ್ ಹೆಲ್ಪ್ ಲೈನ್, ಆಂಬುಲೆನ್ಸ್ ಹಾಗೂ ತುರ್ತು ಕೋವಿಡ್ ಸಹಾಯವಾಣಿ ಸಂಖ್ಯೆ ಕುರಿತ ಮಾಹಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿಯಿರುವ ಬೆಡ್ (ಹಾಸಿಗೆ)ಗಳ ಮಾಹಿತಿ ನೀಡಲಾಗುತ್ತಿದೆ. ಪ್ರಮುಖವಾಗಿ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ಮತ್ತು ಧೈರ್ಯ ನೀಡುವ ಕೆಲಸ ಸಹಾಯವಾಣಿ ಮಾಡಲಿದೆ.

ಸಹಾಯವಾಣಿಯಲ್ಲಿ ಇಬ್ಬರು ಶಿಕ್ಷಕರು, ಓರ್ವ ಹೋಂ ಗಾರ್ಡ್ ಹಾಗೂ ಕೆ.ಕೆ.ಆರ್.ಡಿ.ಬಿ. ಪ್ರಾಯೋಜಿತ ಆರೋಗ್ಯ ಸುರಕ್ಷಾ ಚಕ್ರದ ಓರ್ವ ಆರೋಗ್ಯ ಕಾರ್ಯಕರ್ತ ಇರಲಿದ್ದು, ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ 2 ಪಾಳಿಯಲ್ಲಿ ಕಾರ್ಯನಿರ್ವಹಿಸಲಿವೆ. ಇವುಗಳ ಮೆಲುಸ್ತುವಾರಿಗೆ ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಅವರನ್ನು‌ ನೋಡೆಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ಸಹಾಯವಾಣಿಗೆ ನಿಯೋಜಿಸಿದ ಸಿಬ್ಬಂದಿಗಳು ತಮಗೆ ನೀಡಿದ‌ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿರ್ಲಕ್ಷ್ಯ, ಬೇಜವಾಬ್ದಾರಿದಿಂದ ವರ್ತಿಸಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.