ಕಲಬುರಗಿ‌ ನಗರಕ್ಕೆ ಬೆಣ್ಣೆತೋರಾದಿಂದ ಕುಡಿಯುವ ನೀರು ಪೂರೈಸಿ:ಪ್ರಿಯಾಂಕ್ ಖರ್ಗೆ

ಕಲಬುರಗಿ,ಮೇ.30: ಕಲಬುರಗಿ ನಗರದ ನಿವಾಸಿಗಳಿಗೆ ಬೆಣ್ಣೆತೋರಾ ಜಲಾಶಯದಿಂದ ಕುಡಿಯುವ ನೀರು ಪೂರೈಸಲು ಕೂಡಲೆ ಕ್ರಮ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರಾದ ನಂತರ ಮೊದಲನೇ ಬಾರಿಗೆ ಮಂಗಳವಾರ ಕಲಬುರಗಿಗೆ ಆಗಮಿಸಿದ ಅವರು, ಸಂಜೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರೊಂದಿಗೆ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಮಳೆ, ಪ್ರವಾಹ ನಿಯಂತ್ರಣ, ಕೃಷಿ ಚಟುವಟಿಕೆ, ಕುಡಿಯುವ ನೀರು ವಿಷಯದ ಕುರಿತಂತೆ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬೆಣ್ಣೆತೋರಾದಿಂದ ನಗರಕ್ಕೆ ಕುಡಿಯುವ ನೀರು ಒದಗಿಸುವಂತೆ ಹಿಂದೆ ಹಲವು ಬಾರಿ ಮನವಿ ಮಾಡಿದ್ದೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನೀರು ಪೂರೈಸಲು ನಾಳೆಯಿಂದಲೆ ಕಾರ್ಯಪ್ರವೃತ್ತರಾಗಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಹಾಜರಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಪ್ರಸ್ತುತ 2023-24ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಆಲಿಕಲ್ಲು/ ಸಿಡಿಲು ಬಡಿದು 8 ಜನರು ಸಾವನ್ನಪ್ಪಿದ್ದು, ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಈ ಸಲದ ಮುಂಗಾರು ಹಂಗಾಮಿನಲ್ಲಿ ಒಟ್ಟು 8.87 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದು, ಇದರಲ್ಲಿ 5.93 ಲಕ್ಷ ಹೆಕ್ಟೇರ್ ತೊಗರಿ, 24,000 ಹೆಕ್ಟೇರ್ ಉದ್ದು, 51,000 ಹೆಕ್ಟೇರ್ ಹೆಸರು, 99,450 ಹೆಕ್ಟೇರ್ ಹತ್ತಿ, 45,635 ಹೆಕ್ಟೇರ್ ಕಬ್ಬು, 48,200 ಹೆಕ್ಟೇರ್ ಸೋಯಾಬಿನ್ ಬಿತ್ತನೆಗೆ ಗುರಿ ನಿಗದಿಪಡಿಸಲಾಗಿದೆ. ಇನ್ನು ಹೆಸರು-1,000 ಕ್ವಿಂಟಾಲ್, ಉದ್ದು-500 ಕ್ವಿಂಟಾಲ್, ತೊಗರಿ-6,334 ಕ್ವಿಂಟಾಲ್, ಸೋಯಾಬಿನ್- 18,516 ಕ್ವಿಂಟಾಲ್, ಸೂರ್ಯಕಾಂತಿ-120 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಲಭ್ಯವಿದೆ ಎಂದರು.

ತೊಗರಿ ಹಾನಿ, ತನಿಖೆಗೆ ಡಿ.ಸಿ.ಗೆ ಸೂಚನೆ:

ಸಭೆಯಲ್ಲಿದ್ದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ ‌ನೆಟೆ ರೋಗದಿಂದ ಶೇ.70 ರಷ್ಟು ತೊಗರಿ ಹಾಳಾಗಿದ್ದರು, ಅಧಿಕಾರಿಗಳು ಕೇವಲ ಶೇ.30 ಎಂದು ವರದಿ ಸಲ್ಲಿಸಿದ್ದಾರೆ. ಇದರಿಂದ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ಸಿಗದೆ ಅನ್ಯಾಯವಾಗಿದೆ. ಹಾಗಾಗಿ ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಭೆಯಲ್ಲಿದ್ದ‌ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರಿಗೆ ಸೂಚಿಸಿದರು.

ಕಳೆದ ವರ್ಷ ಕಳಪೆ ತೊಗರಿ ಬೀಜ ಬಿತ್ತನೆ ಮಾಡಿದ್ದರಿಂದ ನೆಟೆ ರೋಗ ತಗುಲಿತ್ತು. ಹಾಗಾಗಿ ಅಂತಹ ಬೀಜಗಳ ಕ್ಷಮತೆ ಪರೀಕ್ಷಿಸಲು ನೀವು ಪ್ರಯೋಗಾಲಯಕ್ಕೆ ಕಳಿಸಿದ್ದೀರಾ? ಎಂದು ಕೃಷಿ ಅಧಿಕಾರಿಗಳಿಗೆ ಪ್ರಶ್ನಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಈ ಸಲ ಮತ್ತೆ ರೈತರು ಅದೇ ತರ ಬೀಜ ಬಿತ್ತನೆ ಮಾಡುವ ಸಾಧ್ಯತೆಯೂ ಇರುವುದರಿಂದ ಸಾಧ್ಯವಾದಷ್ಟು ಹೆಸರು, ಉದ್ದು, ಸೋಯಾಬಿನ್ ಹಾಗೂ ಹತ್ತಿ ಬೆಳೆ ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

ಮುಂದುವರೆದು ಮಾತನಾಡಿದ ಡಾ. ಶರಣಪ್ರಕಾಶ ಪಾಟೀಲ ಅವರು, ಕಳೆದ ವರ್ಷ ಮಳಖೇಡದಲ್ಲಿ ಕಳೆದ ಬೀಜ ಮಾರಾಟ ಮಾಡಿದ ವ್ಯಕ್ತಿಯ ವಿರುದ್ದ ಮಳಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಚಾರ್ಜ್ ಶೀಟ್ ಹಾಕಿಲ್ಲ ಮೊದಲು ಚಾರ್ಜ ಶೀಟ್ ಹಾಕಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಡಾ.ಅವಿನಾಶ ಜಾಧವ, ಬಸವರಾಜ ಮತ್ತಿಮಡು, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಗಿರೀಶ್ ಡಿ. ಬದೋಲೆ, ಎಸ್.ಪಿ. ಇಶಾ ಪಂತ್, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.