ಕಲಬುರಗಿ-ದೆಹಲಿ ನಡುವೆ ವಿಮಾನ ಸಂಚಾರ ಪ್ರಾರಂಭ

ಕಲಬುರಗಿ ನ 18: ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ದೆಹಲಿ ವಿಮಾನ ಹಾರಾಟದ ಕನಸು ಇಂದು ನನಸಾಗಿದೆ. ರಾಷ್ಟ್ರ ರಾಜಧಾನಿ ನಮಗೆ ತೀರಾ ಹತ್ತಿರವಾಗಲಿದೆ. ಐತಿಹಾಸಿಕ ನಗರಗಳಾದ ಕಲಬುರಗಿ-ದೆಹಲಿ (ಹಿಂಡನ್) ಮಧ್ಯೆ ವಿಮಾನ ಸೇವೆ ಇಂದಿನಿಂದ ಆರಂಭಗೊಂಡಿದ್ದು, ಸಂಸದ ಡಾ. ಉಮೇಶ್ ಜಾಧವ್ ಹಸಿರು ನಿಶಾನೆ ತೋರಿದರು.ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಜ್ಯೋತಿ ಬೆಳಗಿಸಿ, ಕೇಕ್ ಕತ್ತರಿಸಿ, ಮೊದಲನೇ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡುವ ಮೂಲಕ ಚಾಲನೆ ನೀಡಿದರು.
ಸ್ಟಾರ್ ಏರ್ ಸಂಸ್ಥೆ ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ ಸೇರಿ 3 ದಿನಗಳ ಕಾಲ ದೆಹಲಿಗೆ ವಿಮಾನ ಹಾರಾಟ ನಡೆಸಲಿದೆ. ಸುಮಾರು 1800 ಕಿ.ಮೀ. ದೂರದಲ್ಲಿರುವ ದೆಹಲಿಗೆ ಈಗ ಎರಡು ಗಂಟೆ 20 ನಿಮಿಷದಲ್ಲಿ ತಲುಪಬಹುದಾಗಿದೆ.
ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಾ. ಉಮೇಶ ಜಾಧವ ಅವರು,ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಯಾದ 1 ವರ್ಷದಲ್ಲಿಯೇ ದೇಶದಲ್ಲಿ ಅತ್ಯಂತ ಹೆಚ್ಚು ಸಕ್ರಿಯ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಸದ್ಯ ಇಲ್ಲಿಂದ ಬೆಂಗಳೂರು,ದೆಹಲಿಗೆ ವಿಮಾನ ಸಂಚಾರ ಆರಂಭವಾಗಿದ್ದು,ಮುಂದೆ ಹುಬ್ಬಳ್ಳಿ, ಹೈದರಾಬಾದ,ಮುಂಬೈ ಮತ್ತು ತಿರುಪತಿಗೆ ಸಂಚಾರ ಆರಂಭಿಸಲಾಗುವದು
ಕಲಬುರಗಿಯಿಂದ ಬೆಳಗ್ಗೆ 10.20ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12.40ಕ್ಕೆ ದೆಹಲಿ ತಲುಪಲಿದೆ. ದೆಹಲಿಯಿಂದ 1.40ಕ್ಕೆ ಹೊರಟು 3.30ಕ್ಕೆ ಕಲಬುರಗಿಗೆ ತಲುಪಲಿದೆ. ವಿಮಾನ ಹಾರಾಟದ ಪ್ರಯೋಜನ ಪಡೆಯುವಂತೆ ಸಂಸದ ಡಾ.ಉಮೇಶ್ ಜಾಧವ್ ಜನತೆಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮೂಡ,ವಿಧಾನ ಪರಿಷತ್ತು ಸದಸ್ಯ ಬಿ.ಜಿ ಪಾಟೀಲ,ವಿಮಾನ ನಿಲ್ದಾಣದ ನಿರ್ದೇಶಕ ಎಸ್ ಜ್ಞಾನೇಶ್ವರರಾವ್,ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಹಾನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು