ಕಲಬುರಗಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿ ಬರ್ಬರ ಕೊಲೆ

ಕಲಬುರಗಿ,ಸೆ.24-ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೈಕೋರ್ಟ ಹತ್ತಿರದ ಕೆ.ಹೆಚ್.ಬಿ.ಕಾಲೋನಿಯಲ್ಲಿ ನಡೆದಿದೆ.
ನಗರದ ಸಂತೋಷ ಕಾಲೋನಿಯ ಗುರುರಾಜ ತಂದೆ ಗೋಪಾಲರಾವ ಕುಲಕರ್ಣಿ (38) ಎಂಬುವವರನ್ನೇ ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಕೊಲೆಗೆ ಹಳೆ ವೈಷಮ್ಯವೇ ಕಾರಣವೆನ್ನಲಾಗಿದೆ.
ಸುದ್ದಿ ತಿಳಿದು ಗ್ರಾಮೀಣ ಪೊಲೀಸ್ ಠಾಣೆ ಪಿ.ಐ, ಪಿ.ಎಸ್.ಐ ಮತ್ತು ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಕುಟುಂಬದ ಸದಸ್ಯರ ಆಕ್ರಂದನ
ಕೊಲೆಯಾದ ಸ್ಥಳದಲ್ಲಿ ಗುರುರಾಜ ಕುಲಕರ್ಣಿ ಅವರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಪಂಚನಾಮೆ ನಡೆಸಿ ಮರಣೋತ್ತರ ಪರೀಕ್ಷಗೆ ಶವ ಸಾಗಿಸಲು ಮುಂದಾದಾಗ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ಹಿಂದೆ ಗುರುರಾಜ ಸಹೋದರ ಅವಧೂತ ಎಂಬುವವರ ಮೇಲೆ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ದೂರು ನೀಡಿದರೂ ಪೊಲೀಸರು ಅವರನ್ನು ಬಂಧಿಸಿಲ್ಲ, ಇದೀಗ ನಡೆದ ಕೊಲೆಗೆ ಪೊಲೀಸರ ನಿರ್ಲಕ್ಷವೇ ಕಾರಣ ಎಂದು ಆರೋಪಸಿದರು. ಪ್ರಕರಣ ದಾಖಲಾದ ಮೇಲೆ ಅವಧೂತ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಹೊರಗಡೆಯೇ ಇದ್ದು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು ಎಂದು ತಿಳಿದುಬಂದಿದೆ.