ಕಲಬುರಗಿ ಡಿ.ಸಿ.ಸಿ ಬ್ಯಾಂಕ್ ನಿಷ್ಕ್ರಿಯಗೊಳಿಸುವ ಪ್ರಶ್ನೆಯೇ ಇಲ್ಲ:ಎಸ್.ಟಿ.ಸೋಮಶೇಖರ

ಕಲಬುರಗಿ.ಏ.11: ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದ ಕಾರಣ ಆರ್ಥಿಕ ಸಂಕಷ್ಟದಲ್ಲಿದ್ದ ಕಲಬುರಗಿ ಡಿ.ಸಿ.ಸಿ ಬ್ಯಾಂಕಿನಲ್ಲಿ ರಾಜ್ಯ ಸರ್ಕಾರ 10 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದೆ. ಇದಲ್ಲದೆ ಅಪೆಕ್ಸ್ ಬ್ಯಾಂಕ್ ಕೂಡ ಹೊಸದಾಗಿ 200 ಕೋಟಿ ರೂ. ಸಾಲ ನೀಡಿರುವುದರಿಂದ ಬ್ಯಾಂಕ್ ನಿಷ್ಕ್ರಿಯಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.

ಅವರು ಸೋಮವಾರ ಸಹಕಾರ ಸಚಿವರಾದ ನಂತರ ಪ್ರಥಮ ಬಾರಿಗೆ ಕಲಬುರಗಿಯಲ್ಲಿರುವ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ಭೇಟಿ ನೀಡಿ ಪ್ರಗತಿ ಪರಿಶೀಲನೆ‌ ನಡೆಸಿ ಮಾತನಾಡಿದರು.

ಆರು ತಿಂಗಳ ಹಿಂದೆ ಕಲಬುರಗಿ ಬ್ಯಾಂಕ್ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟು ಬ್ಯಾಂಕ್ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ನಂತರ ಬ್ಯಾಂಕ್ ಆರ್ಥಿಕ ಚೇತರಿಕೆಗೆ ಅನೇಕ‌ ಕ್ರಮ‌ ಕೈಗೊಂಡ ಪರಿಣಾಮ ಬ್ಯಾಂಕ್‌ ಪುನಶ್ಚೇತನದ ಹಾದಿಯಲ್ಲಿದೆ. ಪ್ರಸ್ತುತ ಇಂದು ಸುಸ್ಥಿದಾರರು ಸಾಲ ಮರುಪಾವತಿ ಮಾಡುತ್ತಿದ್ದರಿಂದ ಬ್ಯಾಂಕ್ ಉತ್ತಮ ಪ್ರಗತಿ ಕಾಣುತ್ತಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

ಆತ್ಮ ನಿರ್ಭರ್ ಭಾರತ ಯೋಜನೆಯಡಿ ರಾಜ್ಯದಲ್ಲಿರುವ 5400 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ( ವಿಎಸ್ಎಸ್ಎನ್) ಪೈಕಿ 1000 ಸಂಘಗಳನ್ನು ಅರ್ಥಿಕವಾಗಿ ಬಲವರ್ಧನೆಗೊಳಿಸಲು ಶೇ.1ರ‌ ಬಡ್ಡಿ ದರದಲ್ಲಿ ತಲಾ 2 ಕೋಟಿ ರೂ. ಹೆಚ್ಚುವರಿ ಸಾಲ ನೀಡಲಾಗುತ್ತಿದೆ. ಇದನ್ನು ಸಂಘಗಳು 7 ವರ್ಷದಲ್ಲಿ ಮರುಪಾವತಿಸಲು ಅವಕಾಶ‌ ನೀಡಿದೆ. ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ಸಂಘಗಳ ಪಟ್ಟಿಯನ್ನು ಕೂಡಲೆ ಕಳುಹಿಸಿಕೊಡುವಂತೆ ಸಚಿವ ಎಸ್.ಟಿ.ಸೋಮಶೇಖರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

30 ಲಕ್ಷ ರೈತರಿಗೆ ಸಾಲ ನೀಡುವ ಗುರಿ: ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯದ 30 ಲಕ್ಷ ರೈತರಿಗೆ ಸುಮಾರು 20 ಸಾವಿರ ಕೋಟಿ ರೂ. ಡಿ.ಸಿ.ಸಿ. ಬ್ಯಾಂಕುಗಳಿಂದ ಸಾಲ ನೀಡುವ ಗುರಿ ಹೊಂದಿದೆ ಎಂದು ಸಹಕಾರ ಸಚಿವರು ತಿಳಿಸಿದರು.

ಕಲಬುರಗಿ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾಗಿರುವ ಶಾಸಕ ರಾಜಕುಮಾರ್ ಪಾಟೀಲ್ ಅವರು ಮಾತನಾಡಿ ಆರು ತಿಂಗಳ ಹಿಂದೆ ಬ್ಯಾಂಕ್ ನಿಷ್ಕ್ರಿಯಗೊಳ್ಳುವ ಭೀತಿಯಲ್ಲಿತ್ತು. ಆದರೆ ತಾವು ಕಳೆದ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಫೆಬ್ರವರಿ ಮತ್ತು‌ ಮಾರ್ಚ್ ತಿಂಗಳಲ್ಲಿ 130 ಕೋಟಿ ರೂ. ಸಾಲ ಸುಸ್ತಿದಾರರಿಂದ ಕಟ್ಟಿಸಿಕೊಳ್ಳಲಾಗಿದೆ.
ಇದಲ್ಲದೆ ಉದ್ಯಮಿಗಳ ಮನವೊಲಿಸಿ 60 ಕೋಟಿ ರೂ. ಡಿಪೋಸಿಟ್ ಹಣ ಪಡೆದು ಒಟ್ಟಾರೆ 197 ಕೋಟಿ ರೂ. ಹಣವನ್ನು ಅಪೆಕ್ಸ್ ಬ್ಯಾಂಕ್ ಗೆ ಹಳೇ‌ ಸಾಲ ನೀಡಿ ಚುಕ್ತಾ ಮಾಡಲಾಗಿದ್ದು, ಬ್ಯಾಂಕಿನ ಕ್ರೆಡಿಟ್ ರೇಷಿಯೋ ಶೇ.10.91ರಷ್ಟು ವೃದ್ಧಿಯಾಗಿದೆ. ಪರಿಣಾಮ‌ ಈ ವರ್ಷ ನಬಾರ್ಡ್ ಸಾಲ ನೀಡಲು‌ ಮುಂದೆ ಬಂದಿದೆ ಎಂದರು.

104 ವರ್ಷ ಇತಿಹಾಸ ಹೊಂದಿರುವ ಬ್ಯಾಂಕಿಗೆ ನೂತನ ಕಟ್ಟಡ ಕಟ್ಟಲು ನಿರ್ಮಿಸಲು ಯೋಚಿಸಿದ್ದು, ಸರ್ಕಾರ 10 ಕೋಟಿ ರೂ. ಹಣ ನೀಡಬೇಕು ಎಂದು ಸಹಕಾರ ಸಚಿವರಲ್ಲಿ ರಾಜಕುಮಾರ‌ ಪಾಟೀಲ ತೇಲ್ಕೂರ ಅವರು ಮನವಿ ಮಾಡಿದರು.

ಪ್ರಸ್ತುತ ಬ್ಯಾಂಕಿನ ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ ರೈತಾಪಿ ವರ್ಗಕ್ಕೆ 500 ಕೋಟಿ ರೂ. ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ 500 ಕೋಟಿ ರೂ. ಸೇರಿದಂತೆ 1000 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ.
ಬ್ಯಾಂಕ್ ಸಿಬ್ಬಂದಿಗಳ ಸಮವಸ್ತ್ರದಲ್ಲಿ ಏಕತೆ ತರುವ ಉದ್ದೇಶದಿಂದ ಎಲ್ಲಾ ಸಿಬ್ಬಂದಿಗಳಿಗೆ ಸಮವಸ್ತ್ರ‌ ನೀಡಲಾಗುತ್ತಿದೆ. ಸಿಬ್ಬಂದಿಗಳ ಕೌಶಲ್ಯ ಮತ್ತು ಅರ್ಹತೆ ಅನುಗುಣವಾಗಿ ಗ್ರೇಡಿಂಗ್ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆ ಇಲ್ಲದ ಕಡೆ ಮೊಬೈಲ್ ಬ್ಯಾಂಕಿಂಗ್ ಪರಿಚಯಿಸಲಾಗುತ್ತಿದೆ ಎಂದು ನೂತನ ಯೋಜನೆಗಳ ಬಗ್ಗೆ ರಾಜಕುಮಾರ್ ಪಾಟೀಲ್ ತೆಲ್ಕೂರ ಅವರು ವಿವರಿಸಿದರು.

ಸಚಿವರಾದ ನಂತರ ಪ್ರಥಮ ಬಾರಿಗೆ‌ ಬ್ಯಾಂಕಿಗೆ ಆಗಮಿಸಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರಿಗೆ ಡಿ.ಸಿ.ಸಿ ಬ್ಯಾಂಕ್ ಆಡಳಿತ ಮಂಡಳಿಯಿಂದ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಸಿಬ್ಬಂದಿಗೆ ಸಮವಸ್ತ್ರ ವಿತರಣೆ: ಇದೇ ಸಂದರ್ಭದಲ್ಲಿ ಯುಗಾದಿ ಹಬ್ಬದ ಕೊಡುಗೆಯಾಗಿ ಸಾಂಕೇತಿಕವಾಗಿ ಬ್ಯಾಂಕಿನ 10 ಜನ ಸಿಬ್ಬಂದಿಗಳಿಗೆ 2 ಜೊತೆ ಸಮವಸ್ತ್ರ ಮತ್ತು ಮೂರು ವರ್ಷದಿಂದ ತಡೆಹಿಡಿಯಲಾದ ವಾರ್ಷಿಕ ಬಡ್ತಿ ವೇತನ ಮಂಜೂರಾತಿ ಪತ್ರವನ್ನು ಸಚಿವರು ವಿತರಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ತಿನ ಶಾಸಕ ಬಿ.ಜಿ. ಪಾಟೀಲ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ್, ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಸುರೇಶ್ ಸಜ್ಜನ್, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು, ಬ್ಯಾಂಕ್ ಅಧಿಕಾರಿ ಸಿಬ್ಬಂದಿಗಳು, ವಿ.ಎಸ್.ಎಸ್.ಎನ್. ಸಂಸ್ಥೆಗಳ ಮುಖ್ಯಸ್ಥರು ಇದ್ದರು.