ಕಲಬುರಗಿ ಜೈಲಿನಿಂದ ಸನ್ನಡತೆಯ 18 ಖೈದಿಗಳ ಬಿಡುಗಡೆ ಉತ್ತಮ ಜೀವನ ಸಾಗಿಸಲು ರಮೇಶ್ ಹಾರೈಕೆ

ಕಲಬುರಗಿ,ಮೇ.26:ನೀವು ಜೈಲಿನಲ್ಲಿ ಕಳೆದ 14 ವರ್ಷಗಳಿಂದ ಒಳ್ಳೆಯ ರೀತಿಯಿಂದ ನಡೆದುಕೊಂಡಿದ್ದರಿಂದ ನಿಮಗೆಲ್ಲ ಬಿಡುಗಡೆಯ ಭಾಗ್ಯ ದೊರಕಿದೆ. ನೀವು ಈಗಾಗಲೇ ಮಾಡಿದ ತಪ್ಪಿಗೆ ಪ್ರಾಯಶ್ಚಿತಪಟ್ಟಿದ್ದೀರಿ. ನಿಮ್ಮ ಮುಂದಿನ ಜೀವನವನ್ನು ನಿಮ್ಮ ಕುಟುಂಬದೊಂದಿಗೆ ಉತ್ತಮವಾಗಿ ಸಾಗಿಸಿ ಎಂದು ನಗರದ ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಅವರು ಹಾರೈಸಿದರು.
ಬುಧವಾರ ಮಧ್ಯಾಹ್ನ ಕೇಂದ್ರ ಕಾರಾಗೃಹದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ರಾಜ್ಯದ ವಿವಿಧೆಡೆ ಕಾರಾಗೃಹಗಳಲ್ಲಿ ಒಟ್ಟು 125 ಜನ ಜೀವಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆಗೆ ಸಂಬಂಧಿಸಿದಂತೆ 16 ಜನ ಪುರುಷರು ಹಾಗೂ ಇಬ್ಬರು ಮಹಿಳೆಯರೂ ಸೇರಿ ಒಟ್ಟು 18 ಜನ ಖೈದಿಗಳಿಗೆ ಬಿಡುಗಡೆಯ ಪತ್ರವನ್ನು ವಿತರಿಸಿ ಮಾತನಾಡಿದ ಅವರು, ಸನ್ನಡತೆಯ ಆಧಾರದ ಮೇಲೆ ಖೈದಿಗಳ ಬಿಡುಗಡೆಯ ನಿರ್ಧಾರವನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಲಹಾ ಸಮಿತಿಯು ತೆಗೆದುಕೊಂಡಿತ್ತು. ಅದರಂತೆ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಹೊಂದಿರುವ ಎಲ್ಲ 18 ಜನರನ್ನು ಕೋವಿಡ್ ನಿಯಂತ್ರಣದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದಲೇ ವಾಹನಗಳ ಮೂಲಕ ಅವರ ಸ್ಥಳಗಳಿಗೆ ತಲುಪಿಸಲಾಗುತ್ತಿದೆ ಎಂದರು.
ಜೀವನದಲ್ಲಿ ನೀವು ತಪ್ಪು ಮಾಡಿ ಜೈಲಿನಲ್ಲಿ 14 ವರ್ಷಗಳವರೆಗೆ ಕಳೆದಿದ್ದೀರಿ. ಜೈಲಿನಲ್ಲಿ ಹೊಲಿಗೆ, ನೇಯ್ಗೆ, ತೋಟಗಾರಿಕೆ, ಕೃಷಿ ಚಟುವಟಿಕೆ ಸೇರಿದಂತೆ ವಿವಿಧ ವೃತ್ತಿಪರ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಸನ್ನಡತೆಯನ್ನು ಪ್ರದರ್ಶಿಸಿದ್ದೀರಿ. ಮಾಡಿದ ತಪ್ಪಿಗೆ ಪ್ರಾಯಶ್ವಿತ ಹೊಂದಿದ್ದೀರಿ. ನಿಮಗೆ ಈಗ ಎಲ್ಲ ಅನುಭವ ಆಗಿದೆ. ನಿಮ್ಮ ಮುಂದಿನ ಜೀವನ ಒಳ್ಳೆಯದಾಗಲಿ ಎಂದು ಅವರು ಹೇಳಿದರು.
ಯಾದಗಿರಿ ಜಿಲ್ಲೆಯ ವಯೋವೃದ್ಧರೊಬ್ಬರಿಗೆ ಬಿಡುಗಡೆ ಪತ್ರ ನೀಡಿದ ರಮೇಶ್ ಅವರು, ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಪದೇ ಪದೇ ಕೇಳುತ್ತಿದ್ದಿ. ಈಗ ನಿನಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ನೀನು ನಿನ್ನ ಮನೆಯ ಕಟ್ಟೆಯ ಮೇಲೆ ಕುಳಿತು ಮೊಮ್ಮಕ್ಕೊಳೊಂದಿಗೆ ಸಂತೋಷಕರ ಜೀವನ ಸಾಗಿಸು ಎಂದು ಹಾರೈಸಿದರು.
ಜೈಲಿನಲ್ಲಿ ಇದ್ದುಕೊಂಡು ನಿಮ್ಮ ಕುಟುಂಬದವರಿಂದ ದೂರವಿದ್ದ ನಿಮಗೆ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದೀರಿ. ಈಗ ನಿಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಿ. ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಿ ಬದುಕಿ ಎಂದು ಅವರು ಹೇಳಿದರು.
ಪಿ. ಕುಮಾರಸ್ವಾಮಿ ತಂದೆ ಪುಟ್ಟಸ್ವಾಮಿಗೌಡ, ರಶೀದ್ ಅಲಿಯಾಸ್ ರಶೀದ್ ಖಾನ್ ತಂದೆ ಹೈದರ್‍ಖಾನ್, ಯಲಗೊಂಡ್ ತಂದೆ ಸಿದ್ದಪ್ಪ, ಶರಣು ಅಲಿಯಾಸ್ ಶರಣಬಸವ ತಂದೆ ಹನುಮಂತಪ್ಪ, ಸೈಯದ್ ಮಹಮ್ಮೂದ್ ಪಾಶಾ ತಂದೆ ಗುಲಾಮ್ ಮೊಹ್ಮದ್, ಮಲ್ಲಣ್ಣ ತಂದೆ ಸಿದ್ದಣ್ಣ ಪಾಟೀಲ್, ಮರಗಪ್ಪ ತಂದೆ ಸಾಬಣ್ಣ ಡೊಳ್ಳೆನೋರ್, ಮರಗಪ್ಪ ತಂದೆ ಮಾರ್ಕಪ್ಪ ಬಾತಪ್ಪನೋರ್, ಬಸವರಾಜ್ ತಂದೆ ಮಾಣಿಕರಾವ್, ರೇವಣಸಿದ್ದಪ್ಪ ತಂದೆ ಸಾಯಿಬಣ್ಣಪ್ಪ, ಗೋಪಾಲ್ ನಾಯಕ್ ತಂದೆ ರೇಖ್ಯಾನಾಯಕ್, ಕಲ್ಲಪ್ಪ ತಂದೆ ಚನ್ನಮಲ್ಲಪ್ಪ ಕಾಡಾ, ಸಂಗಪ್ ತಂದೆ ಹುಸೇನಪ್ಪ, ಸಣ್ಣ ಮುದುಕಪ್ಪ ತಂದೆ ನಿಂಗಪ್ಪ, ಚಂದಪ್ಪ ತಂದೆ ಲಾಲಸಿಂಗ್, ಸಾಬಣ್ಣ ತಂದೆ ನಿಂಗಪ್ಪ ಮಾಸ್ತರ್, ಶೆಟ್ಟೆವ್ಬ ಗಂಡ ತಿಮ್ಮಣ್ಣ, ಲಕ್ಷ್ಮೀ ಗಂಡ ಲಕ್ಷ್ಮಣ್ ವಡ್ಡರ್ ಅವರಿಗೆ ಪಿ.ಎಸ್. ರಮೇಶ್ ಅವರು ಬಿಡುಗಡೆಯ ಪತ್ರವನ್ನು ನೀಡಿದರು.
ಹಳೆಯ ಮೈಸೂರು ಭಾಗದ ವ್ಯಾಪಾರಿಯೊಬ್ಬ ವೃತ್ತಿಪರ ವೈಷಮ್ಯಕ್ಕೆ ಕೊಲೆ ಮಾಡಿ ಬಿಡುಗಡೆ ಹೊಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ನಾನು ನಿಜವಾಗಿಯೂ ಅಲ್ಲಿಯೇ ಬಂಧಿಯಾಗಿದ್ದರೆ ನಾನು ಉಳಿಯುತ್ತಿರಲಿಲ್ಲ. ನಾನು ಕಲಬುರಗಿ ಜೈಲಿಗೆ ಬಂದಿದ್ದರಿಂದಲೇ ನನಗೆ ಪುನರ್ಜನ್ಮ ಸಿಕ್ಕಿದೆ. ನಾನು ಕೊಲೆ ಮಾಡಬಾರದಿತ್ತು. ಆದಾಗ್ಯೂ, ನನ್ನ ಬದುಕಿಗೆ ಅದು ಅನಿವಾರ್ಯವಾಗಿತ್ತು. ನಾನು ಇನ್ನು ಮುಂದೆ ನನ್ನ ತಂದೆ, ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಶಯದಿಂದ ಸಂತೋಷದಿಂದ ನನ್ನೂರಿಗೆ ಹೋಗುವೆ. ಕೆಲಸ ಕಾರ್ಯಗಳಿಗಾಗಿ ಕೇವಲ ನಗರಕ್ಕೆ ನಾವು ಸೀಮಿತರಾಗುವ ಬದಲು ನಮ್ಮ ಗ್ರಾಮೀಣ ಪ್ರದೇಶದಲ್ಲಿಯೇ ಬದುಕು ಸಾಗಿಸಲು ಶಿಕ್ಷೆಯು ನನಗೆ ನೆರವಾಯಿತು ಎಂದು ಹೇಳಿದರು.
ಇನ್ನೋರ್ವ ವಯೋವೃದ್ಧ ಮಾತನಾಡಿ, ಏನೋ ನನ್ನ ಕೈತಪ್ಪಿ ಒಂದು ಅನಾಹುತ ಆಯಿತು. ನಾನು ಇಂತಹ ಇಳಿ ವಯಸ್ಸಿನಲ್ಲಿಯೂ ಜೈಲಿನಲ್ಲಿ 14 ವರ್ಷ ಕಳೆದೆ. ಇಲ್ಲಿ ನನಗೆ ಜೀವನದ ಪಾಠ ಸಿಕ್ಕಿದೆ. ನನ್ನ ಕುಟುಂಬದೊಂದಿಗೆ ಕಾಲ ಕಳೆಯುವೆ ಎಂದು ಧನ್ಯತಾ ಭಾವದಿಂದ ಹೇಳಿದ.
ಸೊಸೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಆದಾಗ್ಯೂ, ಅದು ಕೊಲೆ ಪ್ರಕರಣ ದಾಖಲಾಗಿದ್ದರಿಂದ ನಾನು ಹಾಗೂ ನನ್ನ ಪುತ್ರಿ ಒಂದು ವರ್ಷ ಸ್ಥಳೀಯ ಜೈಲಿನಲ್ಲಿ, ನಂತರದ 13 ವರ್ಷಗಳು ಕಲಬುರಗಿ ಜೈಲಿನಲ್ಲಿ ಕಳೆದಿದ್ದೇವೆ. ಜೈಲಿನಲ್ಲಿ ನಮಗೆ ಉತ್ತಮ ಬದುಕು ಕಂಡುಕೊಳ್ಳಲು ಸಾಧ್ಯವಾಗಿದೆ. ನಾವು ಇನ್ನು ಮುಂದೆ ಉತ್ತಮ ರೀತಿಯಲ್ಲಿ ಬದುಕು ಸಾಗಿಸುತ್ತೇವೆ ಎಂದು ಬೀದರ್ ಜಿಲ್ಲೆಯ ಬೆಮಳಖೇಡಾದ ಮಹಿಳೆ ಮತ್ತು ಆಕೆಯ ಪುತ್ರಿ ಹೇಳಿದರು. ಪುತ್ರಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಅವರಿಂದ ಇಲ್ಲಿಯವರೆಗೆ ದೂರ ಇದ್ದದ್ದು ನನಗೆ ನೋವು ತರಿಸಿತ್ತು. ಈಗ ನನ್ನ ಕುಟುಂಬ ಸೇರಿಕೊಳ್ಳುತ್ತಿರುವುದು ಸಂತೋಷವಾಗಿದೆ ಎಂದು ಶ್ರೀಮತಿ ಲಕ್ಷ್ಮೀ ಹೇಳಿದರು.
ಈ ಸಂದರ್ಭದಲ್ಲಿ ಜೈಲರ್‍ಗಳಾದ ಶ್ರೀಮತಿ ಸುನಂದಾ, ಗೋಪಾಲಕೃಷ್ಣ ಕುಲಕರ್ಣಿ, ಶೈನಾಜ್ ಎಂ. ನಿಗೋಣಿ, ಸರೋಜಾ ಎಸ್.ಟಿ. ನಾಗರಾಜ್ ಮೂಲಗೆ ಶಿಕ್ಷಕರು, ಶ್ರೀಕಾಂತ್ ಮುಂತಾದ ಸಿಬ್ಬಂದಿಗಳೂ ಸಹ ಉಪಸ್ಥಿತರಿದ್ದರು.