ಕಲಬುರಗಿ, ಜೇವರ್ಗಿ ತಾಲೂಕಿನಲ್ಲಿ ಕೊರೊನಾ ಜಾಗೃತಿ

ಕಲಬುರಗಿ:ಮೇ.19: ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಾ (ಎನ್‌ಎಸ್‌ಎಸ್‌) ಕೋಶದಿಂದ ಜೇವರ್ಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ನಂದಿಕೂರ, ಪಾಣೆಗಾಂವ, ಕಣ್ಣಿ ತಾಂಡಾ, ತಾಡತೆಗನೂರ, ಖಾನಿ, ಫರತಾಬಾದ, ಕಟ್ಟಿಸಂಗಾವಿ ಗ್ರಾಮಗಳಲ್ಲಿ ಅಭಿಯಾನ ನಡೆಸಿ ಗ್ರಾಮಸ್ಥರಿಗೆ ಮಾಸ್ಕ್ ವಿತರಿಸಲಾಯಿತು.

ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿಗಳಾದ ಪ್ರೊ. ರಮೇಶ ಲಂಡನಕರ್, ‘ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕಲಬುರಗಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡು ಒಬ್ಬರು ಸಾವಿಗೀಡಾದರು. ಕೊರೊನಾ ಮಹಾಮಾರಿಗೆ ಅತಿ ಹೆಚ್ಚು ಯುವಕರು ಬಲಿಯಾಗುತ್ತಿದ್ದಾರೆ. ಆದ್ದರಿಂದ ಯುವಕರು ಹೆಚ್ಚು ಜವಾಬ್ದಾರಿಯಿಂದ ಸರಕಾರದ ನಿಯಮವನ್ನು ಪಾಲಿಸಬೇಕು. ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕು. ಮನೆಯಿಂದ ಹೊರಹೋಗಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಶಾ ಕಾರ್ಯಕರ್ತೆಯರನ್ನು ಹಾಗೂ ವೈದ್ಯರನ್ನು ಸಂಪರ್ಕಿಸಬೇಕು. ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಕುಟುಂಬಗಳನ್ನು ಕಾಳಜಿಯಿಂದ ರಕ್ಷಿಸಿಕೊಳ್ಳಬೇಕು. ಇದು ನಾಗರಿಕರ ಜವಾಬ್ದಾರಿಯಾಗಿರುತ್ತದೆ. ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಒಂದು ವೇಳೆ ಸರಕಾರದ ಸೂಚನೆಗಳನ್ನು ನಿರ್ಲಕ್ಷಿಸಿದರೆ ಈ ದುರಂತಕ್ಕೆ ನಾವೇ ಹೊಣೆಗಾರರಾಗುತ್ತೇವೆ.ಆಗ ಕುಟುಂಬಗಳು ಬೀದಿಗೆ ಬರುತ್ತವೆ’ ಎಂದರು.

ನಂದಿಕೂರ ಗ್ರಾಮ ಪಂಚಾಯಿತಿ ಪಿಡಿಒ ಸಂದೀಪ ಗುತ್ತೇದಾರ, ಗುರು ಚವ್ಹಾಣ, ಶರಣು ಗಾಣಗಾಪುರ ಹಾಗೂ ಎನ್‌ಎಸ್‌ಎಸ್‌ ಸಿಬ್ಬಂದಿ ಇದ್ದರು.

ಚಿತ್ರ: ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದಲ್ಲಿ ಗುಲಬರ್ಗಾ ವಿ.ವಿ. ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿಗಳಾದ ಪ್ರೊ. ರಮೇಶ ಲಂಡನಕರ್ ಮಾತನಾಡಿದರು. ಪಿಡಿಒ ಸಂದೀಪ ಗುತ್ತೇದಾರ, ಗ್ರಾಮಸ್ಥರು ಹಾಗೂ ವಿ.ವಿ. ಸಿಬ್ಬಂದಿ ಭಾಗವಹಿಸಿದ್ದರು