ಕಲಬುರಗಿ ಜಿಲ್ಲೆಯ ಜಾತ್ರೆಗಳು ಜಾನಪದ ಕ್ಷೇತ್ರದ ಮಹತ್ವದ ಕೃತಿಯಾಗಿದೆ:ಪ್ರೊ. ಶಿವಶರಣಪ್ಪ ಮೂಳೆಗಾಂವ

ಕಲಬುರಗಿ,ಜೂ.26:ನಗರದ ವಿಶ್ವಜ್ಯೋತಿ ಬಡಾವಣೆಯಲ್ಲಿ ಜಾನಪದ ವಿದ್ವಾಂಸ ಡಾ. ಚಿ.ಸಿ. ನಿಂಗಣ್ಣ ಅವರ ಸಾಹಿತ್ಯ ಕುಟೀರದಲ್ಲಿ ದೇವರಾಜ ಅರಸು ಮತ್ತು ಎಸ್. ಬಂಗಾರಪ್ಪ ಸಾಂಸ್ಕøತಿಕ ಸಂಘದ ವತಿಯಿಂದ ಡಾ. ನಿಂಗಣ್ಣನವರು ರಚಿಸಿದ ಕಲಬುರಗಿ ಜಿಲ್ಲೆಯ ಜಾತ್ರೆಗಳು ಕೃತಿಲೋಕಾರ್ಪಣೆ ಸಮಾರಂಭ ಏರ್ಪಡಿಲಾಗಿತ್ತು, ಪರಮಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಶ್ರೀನಿವಾಸ ಸರಡಗಿ ಇವರು ಜ್ಯೋತಿಬೆಳಗಿಸುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಆಧುನಿಕ ಜೀವನ ಶೈಲಿಯಿಂದ ಬದುಕು ಯಾಂತ್ರಿಕವಾಗುತ್ತ ಸಾಗಿದೆ, ಇದರಿಂದ ನಾವು ನಮ್ಮವರು ಎನ್ನುವ ಸಮೂಹ ಕಲ್ಪನೆ ಮಾಯವಾಗಿದೆ. ಆದರೆ ನಮ್ಮ ಜನಪದರು ಸಮೂಹಕಲ್ಪನೆಯೊಂದಿಗೆ ಅದ್ಭುತ ಸಂಸ್ಕøತಿಯನ್ನು ಕಟ್ಟಿಕೊಟ್ಟಿದ್ದಾರೆ ನಾವು ನಮ್ಮ ದೇಶಿಯತೆಯನ್ನು ಮರೆಯಬಾರದು, ಜಾತ್ರೆಗಳಿಂದ ಸಮಾಜದಲ್ಲಿ ಐಕ್ಯತೆಯನ್ನು ಮೂಡಿಸಲು ಸಾಧ್ಯವಿದೆ ಎಂದು ತಿಳಿಸುತ್ತ, ಸಾಹಿತ್ಯ ಕುಟೀರದಲ್ಲಿ ಆಗಾಗ ಚಿಂತನ ಮಂಥನ ಕಾರ್ಯಕ್ರಮಗಳು ಜರುಗಲೆಂದು ಶುಭಹಾರೈಸಿದರು. ಕೃತಿಲೋಕಾರ್ಪಣೆಗೊಳಿಸಿ ಮಾತನಾಡಿದ ಡಿಡಿಪಿಯು ಪ್ರೊ. ಶಿವಶರಣಪ್ಪ ಮೂಳೆಗಾಂವ ಅವರು “ಕಲಬುರಗಿ ಜಿಲ್ಲೆಯ ಜಾತ್ರೆಗಳು” ಇದು ಜನಪದ ಸಂಶೋಧನಾ ಗ್ರಂಥವಾಗಿದ್ದು, ಅಧ್ಯಯನಕಾರರಿಗೆ ಆಕಾರಗ್ರಂಥವಾಗಿದೆ. ಜಾತ್ರೆಗಳು ಅನಾದಿಕಾಲದಿಂದಲೂ ಜನಪದರ ಬದುಕಿನ ಅವಿಭಾಜ್ಯ ಅಂಗವಾಗಿ ಬಹು ಉಪಯುಕ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತ ಬರುತ್ತಿವೆ. ವೃತ್ತ ಪತ್ರಿಕೆಗಳಿಲ್ಲದ ಕಾಲದಲ್ಲಿ ಜಾತ್ರೆಗಳು ಸಮೂಹ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುತ್ತ ಬಂದಿವೆ. ಜಾತ್ರೆಗಳಲ್ಲಿ ಸಾಹಿತ್ಯ, ಕಲೆ, ಕ್ರೀಡೆ, ಧಾರ್ಮಿಕ ಆಚರಣೆ, ನಂಬಿಕೆ, ಸಂಪ್ರದಾಯಗಳು ಜರುಗುವುದರೊಂದಿಗೆ, ಜನಪದರ ಬದುಕಿನ ತ್ಯಾಗ, ಪ್ರೀತಿ, ವಿಶ್ವಾಸ, ಸಾಹಸ, ಕರುಣೆ, ಭಕ್ತಿ ಹೀಗೆ ಹತ್ತಾರು ಅಂಶಗಳನ್ನು ದರ್ಶನ ಮಾಡಿಸುವಲ್ಲಿ ಈ ಗ್ರಂಥ ಮಹತ್ವದ್ದಾಗಿದೆ. ಜಾತ್ರೆಗಳು ಸಾಮಾಜಿಕ-ಧಾರ್ಮಿಕ-ಸಾಂಸ್ಕøತಿಕ-ಆರ್ಥಿಕ, ರಾಜಕೀಯ ಕೇಂದ್ರಗಳಾಗಿ ಪರಿವರ್ತನೆ ಹೊಂದಿ, ಅವು ತಮ್ಮದೆಯಾದ ಮಹತ್ವದ ಪಾತ್ರವಹಿಸುತ್ತ ಬರುತ್ತಿರುವುದನ್ನು ಲೇಖಕರು ಜಿಲ್ಲೆಯ ನೂರಾರು ಜಾತ್ರೆಗಳಲ್ಲಿ ಜರುಗುವ ಆಚರಣೆಗಳನ್ನು ಹಾಗೂ ಮಹತ್ವದ ಅಂಶಗಳನ್ನು ಕೃತಿಯಲ್ಲಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತಿ ಜಾನಪದ ಕ್ಷೇತ್ರದಲ್ಲಿ ಮಹತ್ವದ ಕೃತಿಯಾಗಿದೆ. ಡಾ. ಚಿ.ಸಿ. ನಿಂಗಣ್ಣನವರು ಜಾನಪದ-ವಚನ-ವಿಮರ್ಶೆ-ವಿಚಾರಸತ್ವ-ಚರಿತ್ರೆ-ಸಂಪಾದನೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ವಯಸ್ಸನ್ನು ಮೀರಿ ಸಾಧನೆಮಾಡಿದ್ದಾರೆ. ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆಸಲ್ಲಿಸುತ್ತ ಬರುತ್ತಿರುವ ಚಿಂತಕರಾಗಿದ್ದಾರೆಂದು ತಿಳಿಸಿದರು. ಶ್ರೀ ರವೀಂದ್ರ ವಿಭೂತಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ ಬಸವರಾಜ ಕೊನೇಕ ಅವರು ಲೇಖಕರಾದ ಡಾ. ಚಿ.ಸಿ. ನಿಂಗಣ್ಣನವರು ನಮ್ಮ ಪ್ರಕಾಶನ ಸಂಸ್ಥೆಯ ಸಲಹಾಸಮಿತಿ ಗೌರವ ಸದಸ್ಯರು ತುಂಬಾ ಕ್ರೀಯಾಶೀಲರು ಬಹುಮುಖ ಪ್ರತಿಭೆಗೆ ಅವರ ವ್ಯಕ್ತಿತ್ವ ಸಾಕ್ಷಿಯಾಗಿದೆ ಎಂದರು. ಆರಂಭದಲ್ಲಿ ಬಿ.ಎಸ್. ಮಾಲಿಪಾಟೀಲ ಸ್ವಾಗತಿಸಿದರು, ಡಾ. ಚಿ.ಸಿ. ನಿಂಗಣ್ಣ ಪ್ರಾಸ್ತಾವಿಕ ಮಾತನಾಡಿ ಗಣ್ಯರನ್ನು ಗೌರವಿಸಿದರು, ಡಾ. ಶಂಕರ ಬಾಳಿ ನಿರೂಪಿಸಿದರು, ಪ್ರೊ. ಬಿ.ಎಚ್. ನಿರಗುಡಿ ವಂದನಾರ್ಪಣೆ ಮಾಡಿದರು, ಬಸವರಾಜ ಪಾಟೀಲ, ಪ್ರೊ. ಶಿವರಾಜ ಪಾಟೀಲ, ಪ.ಮಾನು. ಸಗರ, ಶರಣಗೌಡ ಪಾಟೀಲ ಪಾಳಾ, ಮಳಿಮಠ, ನೀಲಕಂಠ ಹಾಬಾಳ, ರಾಜಕುಮಾರ ಪಾಟೀಲ, ಡಾ. ನಾಗಪ್ಪ ಗೋಗಿ, ಶಿವಾನಂದ ತೊರವಿ, ವಿಶ್ವನಾಥ ಭಕರೆ, ರಮೇಶ ಬಡಿಗೇರ ಅನೇಕರು ಸಮಾರಂಭದಲ್ಲಿ ಭಾಗಿಯಾಗಿದ್ದರೆಂದು ಲೇಖಕರಾದ ಡಾ. ಚಿ.ಸಿ. ನಿಂಗಣ್ಣನವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.