ಕಲಬುರಗಿ ಜಿಲ್ಲೆಯಲ್ಲಿ 23 ಸಾವಿರ ಹೆಕ್ಟೇರ್‍ನಲ್ಲಿ ತೋಟಗಾರಿಕಾ ಬೆಳೆ : ಇನಾಂದಾರ್

ಕಲಬುರಗಿ,ಸೆ.21: ಕಲಬುರಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ರೈತರ ಆಸಕ್ತಿ ಹೆಚ್ಚುತ್ತಿದ್ದು ಜಿಲ್ಲೆಯಲ್ಲಿ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ವಿಸ್ತರಣೆಗೊಂಡಿದೆ ಎಂದು ಕಲಬುರಗಿ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕರಾದ ಸಂತೋಷ್ ಇನಾಂದಾರ್ ಹೇಳಿದರು.
ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ಸೆ. 21 ರಂದು ‘ಜೊತೆ ಜೊತೆಯಲಿ’ ನೇರ ಫೋನ್ ಇನ್ ಸಂವಾದದಲ್ಲಿ ಮಾತನಾಡಿದ ಅವರು ಅಳಂದ, ಅಫಜಲ್ಪುರ ಮತ್ತು ಕಲಬುರಗಿ ಗ್ರಾಮೀಣ ತಾಲೂಕುಗಳಲ್ಲಿ ತೋಟಗಾರಿಕಾ ಬೆಳೆ ಹೆಚ್ಚಿದ್ದು ತರಕಾರಿ, ಹೂವು, ದ್ರಾಕ್ಷಿ, ಪಪ್ಪಾಯ, ಬಾಳೆ, ಅರಶಿಣ, ಸೀತಾಫಲ, ಮಾವು ಬೆಳೆಯಲಾಗುತ್ತಿದೆ. ಕಮಲಾಪುರದಲ್ಲಿ ಕೆಂಪು ಬಾಳೆ, ಗುಲಾಬಿ ಸೇವಂತಿಗೆ, ಚೆಂಡು ಹೂವು ಬೆಳೆಯಲಾಗುತ್ತಿದ್ದು ಜಿಲ್ಲೆಯಲ್ಲಿ 4500 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಕೃಷಿ ಇದೆ ಎಂದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮೂಲಕ ಹನಿ ನೀರಾವರಿಗೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಗಳ ಮೂಲಕ ಬೆಳೆ ಹಾಗೂ ಯಂತ್ರೋಪಕರಣ ಪಡೆಯಲು ರೈತರಿಗೆ ವಿಶೇಷ ಸೌಲಭ್ಯ ಯೋಜನೆಗಳಿವೆ. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ತೋಟಗಾರಿಕೆ ಬೆಳೆಗಳ ಕ್ಲಸ್ಟರ್ ಆರಂಭಕ್ಕೆ ಉತ್ತೇಜನ ನೀಡಲಾಗುತ್ತಿದ್ದು ಖಜೂರಿಯಲ್ಲಿ ಸೀತಾಫಲ, ಅಳಂದದಲ್ಲಿ ಮಾವಿನ ಬೆಳೆ ಚಿಂಚೋಳಿಯಲ್ಲಿ ಅರಿಶಿಣ ಹಾಗೂ ಮಾವು, ಚಿತ್ತಾಪುರದಲ್ಲಿ ಸೀತಾಫಲ ಬೆಳೆಸಲು ಪ್ರೋತ್ಸಹ ನೀಡಲಾಗುತ್ತಿದೆ. ಬಾಳೆ, ಡ್ರ್ಯಾಗನ್‍ಪ್ರುಟ್ ಲಿಂಬೆಗೆ ಈ ಜಿಲ್ಲೆಯಲ್ಲಿ ರೈತರು ಆಸಕ್ತಿ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಾಗಿ 5 ನರ್ಸರಿಹೊಂದಲಾಗಿದೆ ಎಂದು ಇನಾಂದಾರ ಹೇಳಿದರು.
ಸುರಪುರದ ರಾಘವೇಂದ್ರ ಭಕ್ರಿ, ಕಾಳಗಿಯ ಚಂದ್ರಕಾತ ನಾಗಣ್ಣ, ಅಳಂದ ವೈಜಾಪುರದ ವಾಸುದೇವ ಪಾಟೀಲ್, ಬೀದರ್ ಭಾಲ್ಕಿಯ ಪ್ರದೀಪ್, ಅಳಂದದ ನಾಗೇಂದ್ರ ಬಡದಾಳ್ ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಮಧು ದೇಶಮುಖ್ ನೆರವಾದರು. ಅನುಷಾ ಡಿ. ಕೆ, ಪ್ರಭು ನಿಷ್ಠಿ ಮತ್ತು ಫೆಬಿ ಶೇSರ್ ತಾಂತ್ರಿಕ ನೆರವು ನೀಡಿದರು ಎಂದು ಕಾರ್ಯಕ್ರಮ ಸಂಯೋಜಕರಾದ ಅನಿಲ್ ಕುಮಾರ್ ಎಚ್. ಎನ್ ತಿಳಿಸಿದ್ದಾರೆ.