ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷ 50 ಸಾವಿರ ಜನರಿಗೆ ಕೋವಿಡ್ ಲಸಿಕೆ ಗುರಿ ರಾಜ್ಯದ ಬೃಹತ್ ಲಸಿಕಾ ಅಭಿಯಾನಕ್ಕೆ ಸೆ.17 ರಂದು ಸಿಎಂ ಚಾಲನೆ:ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ

ಕಲಬುರಗಿ.ಸೆ.15:ಇದೇ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕಾಗಿ ಆಗಮಿಸಲಿರುವ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಂದು ಒಟ್ಟು 1 ಲಕ್ಷ 50 ಸಾವಿರ ಜನರಿಗೆ ಕೋವಿಡ್ ಲಸಿಕಾ ಚುಚ್ಚುಮದ್ದು ಹಾಕುವ ಗುರಿಹೊಂದಲಾಗಿದೆ ಎಂದು ಹೇಳಿದರು. 18 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಲಸಿಕೆ ಹಾಕುವ ಗುರಿ ಇಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಬೃಹತ್ ಕೋವಿಡ್ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಪ್ರತಿ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದ ಅವರು, ಪ್ರತಿ ತಾಲೂಕಿಗೆ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಇನ್ನು ಲಸಿಕಾ ಅಭಿಯಾನದ ದಿನ ಕಲಬುರಗಿ ನಗರ ವ್ಯಾಪ್ತಿಯ ಉಸ್ತುವಾರಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಮೇಶ ಸಂಗಾ ಅವರಿಗೆ ವಹಿಸಲಾಗಿದೆ ಎಂದರು.
ಈವರೆಗೆ ಚಿತ್ತಾಪೂರ ಹಾಗೂ ಜೇವರ್ಗಿ ತಾಲೂಕುಗಳಲ್ಲಿ ಲಸಿಕಾ ಪ್ರಮಾಣ ಕಡಿಮೆ ಆಗಿರುವಲ್ಲಿ ಹೆಚ್ಚು ಗಮನ ಹರಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಡಿ.ಸಿ. ನಿದೇರ್ಶಿಸಿದರಲ್ಲದೇ, ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದುಕೊಂಡವರನ್ನು, ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳುವಂತೆ ಕಡ್ಡಾಯವಾಗಿ ಲಸಿಕಾ ಅಭಿಯಾನದ ಒಳಗಾಗಿ ತಿಳಿಸಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ಒಪ್ಪಿಸಿದರು.
ಅಭಿಯಾನದ ಅಂಗವಾಗಿ ಜಿಲ್ಲೆಯ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಎಲ್ಲಾ ಸಿಬ್ಬಂದಿಯು ಸಾರ್ವಜನಿಕರನ್ನು ಲಸಿಕೆ ಪಡೆಯುವಂತೆ ಮಾಡಲು ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಕಲಬುರಗಿ ನಗರದಲ್ಲಿ ವಿವಿದೆಢೆÉ ಒಟ್ಟು 100 ಲಸಿಕಾ ಕ್ಯಾಂಪ್ ಇರಲಿದ್ದು, ಬೆಳಗ್ಗೆ 7 ಗಂಟೆಗೆ ಲಸಿಕೆ ಹಾಕುವ ಪ್ರಕ್ರಿಯೆ ಆರಂಭಿಸಲಾಗುವುದು. ಸಾರ್ವಜನಿಕರು ಲಸಿಕೆ ಪಡೆಯಲು ಪ್ರೇರೇಪಿಸುವಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಅಂತಿಮ ವರ್ಷದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಬೆಳಿಗ್ಗೆ 7 ಗಂಟೆಗೆ ಲಸಿಕಾ ಅಭಿಯಾನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪ್ರತಿ ಲಸಿಕಾ ಕ್ಯಾಂಪ್ ಬಳಿ ಕಡ್ಡಾಯವಾಗಿ ವೈದ್ಯಕೀಯ ತಂಡ ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿ ಇರಬೇಕೆಂದು ಹೇಳಿದ ಜಿಲ್ಲಾಧಿಕಾರಿಗಳು, ಪ್ರತಿ ತಾಲೂಕಿನ ವ್ಯಾಕ್ಸಿನೇಷನ್ ಸ್ಥಳದಲ್ಲಿ ಲಸಿಕಾಕರಣಕ್ಕೆ ಸಂಬಂಧಿಸಿ ದತ್ತಾಂಶ ಸಂಗ್ರಹಿಸಲು ತಂಡ ಸಿದ್ದವಿರಬೇಕೆಂದು ಹೇಳಿದರು.
ಈ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಸುಧಾಕರ ಲೋಖಂಡೆ, ಸೇಡಂ ಸಹಾಯಕ ಆಯುಕ್ತೆ ಅಶ್ವಿಜಾ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಸರ್ಜನ್ ಡಾ. ಅಂಬಾರಾಯ ರುದ್ರವಾಡಿ, ಆರ್.ಸಿ.ಎಚ್.ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾ ಬಕಷ್ ಸೇರಿದಂತೆ ವಿವಿಧ ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಲಸಿಕಾ ಕೇಂದ್ರಗಳ ವಿವರ: ಬೃಹತ್ ಲಸಿಕಾ ಅಭಿಯಾನದ ಅಂಗವಾಗಿ ಜಿಮ್ಸ್ ಜಿಲ್ಲಾ ಆಸ್ಪತ್ರೆ, ಇ.ಎಸ್.ಐ., ಯುನಾನಿ ಆಸ್ಪತ್ರೆ ಬಳಿ ತಲಾ ಒಂದು ಲಸಿಕಾ ಕೇಂದ್ರ, ನಗರ ಆರೋಗ್ಯ ಕೇಂದ್ರ-15, ಪ್ರಸೂತಿ ಆರೋಗ್ಯ ಕೇಂದ್ರ-2, ಸಮುದಾಯ ಆರೋಗ್ಯ ಕೇಂದ್ರ-16, ಸಮುದಾಯ ಆರೋಗ್ಯ ಉಪಕೇಂದ್ರಗಳ ಬಳಿ-335, ತಾಲೂಕು ಆಸ್ಪತ್ರೆ -7, ಒಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ-83, ಒಟ್ಟು ವಿಶೇಷ ಲಸಿಕಾ ಶಿಬಿರಗಳು-225, ಒಟ್ಟಾರೆ 686 ಲಸಿಕಾ ಶಿಬಿರಗಳು ನಡೆಯಲಿವೆ.
ಲಸಿಕಾಕರಣದ ಗುರಿ ವಿವರ: ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕು, ಆಳಂದ, ಚಿಂಚೋಳಿ, ಕಲಬುರಗಿ ಗ್ರಾಮೀಣ, ಸೇಡಂ, ಯಡ್ರಾಮಿ, ಶಹಾಬಾದ, ಕಾಳಗಿ, ಹಾಗೂ ಕಮಲಾಪುರ ತಾಲೂಕುಗಳಲ್ಲಿ ತಲಾ 10 ಸಾವಿರ ಜನರಿಗೆ ಬೃಹತ್ ಲಸಿಕಾ ಅಭಿಯಾನದ ದಿನದಂದು ಚುಚ್ಚುಮದ್ದು ನೀಡುವ ಗುರಿ ಹೊಂದಲಾಗಿದೆ.
ಇನ್ನು ಕಲಬುರಗಿ ನಗರದಲ್ಲಿ 30 ಸಾವಿರ, ಚಿತ್ತಾಪೂರ ಮತ್ತು ಜೇವರ್ಗಿ ತಾಲೂಕಿನಲ್ಲಿ ತಲಾ 15 ಸಾವಿರ ಜನರಿಗೆ ಲಸಿಕಾ ನೀಡುವ ಗುರಿಯಿದೆ.