ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಘೋಷಣೆಗೆ ಡಾ. ಅಷ್ಠಗಿ ಆಗ್ರಹ

ಕಲಬುರಗಿ ಜು.16:ಕಲಬುರಗಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು ಜೂನ್ ಹಾಗೂ ಜುಲೈ ತಿಂಗಳ 15 ದಿನಗಳು ಗತಿಸಿದರೂ ಮಳೆಯಾಗಿಲ್ಲ, ಜಿಲ್ಲೆಯ ರೈತಾಪಿ ವರ್ಗ ಬಿತ್ತನೆ ಕಾರ್ಯ ಮಾಡದೆ ಸಂಕಷ್ಟದಲ್ಲಿದ್ದಾರೆ.
ಆದ್ದರಿಂದ ಈ ಕೂಡಲೇ ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಅನ್ನದಾತನ ನೆರವಿಗೆ ಬರಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ ಯವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೂನ್ ತಿಂಗಳಿನಲ್ಲಿ ಮುಂಗಾರು ಪ್ರವೇಶಿಸಬೇಕಿತ್ತು,ಆದರೆ ಚೆಂಡ ಮಾರುತಗಳ ವೈಪರೀತ್ಯದಿಂದ ಇಲ್ಲಿಯವರೆಗೆ ಮಳೆ ಆಗಿರುವುದಿಲ್ಲ.
ಜಿಲ್ಲೆಯ ಶೇ. 95% ರಷ್ಟು ರೈತರು ಬಿತ್ತನೆ ಕಾರ್ಯ ಕೈಗೊಂಡಿಲ್ಲ.ಮಳೆಯನ್ನು ನಂಬಿ ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಖರೀದಿ ಮಾಡಿದ್ದಾರೆ.
ಆದರೆ ಮಳೆ ಮಾತ್ರ ಲವಲೇಶವೂ ಬರುತ್ತಿಲ್ಲ ಇದರಿಂದ ಜಿಲ್ಲೆಯ ಕೃಷಿಕ ಸಮುದಾಯ ತೀವ್ರ ಆತಂಕದ ಸ್ಥಿತಿ ಎದುರಿಸುತ್ತಿದೆ.
ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಯುದ್ಧೊಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು
ಡಾ.ಅಂಬಾರಾಯ ಅಷ್ಠಗಿ ಯವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆ ಬಾರದೇ ಇರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವದಿಂದ ತೀವ್ರ ತೊಂದರೆಯಾಗಿದೆ.
ಆದ್ದರಿಂದ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯ ತ್ವರಿತವಾಗಿ ಮಾಡಬೇಕು ಹಾಗೆಯೇ ಜಾನುವಾರುಗಳಿಗಾಗಿ ಪ್ರತಿಯೊಂದು ಗ್ರಾಮಗಳ ಮಟ್ಟದಲ್ಲಿ ಮೇವು ಕೇಂದ್ರಗಳನ್ನು ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಡಾ.ಅಷ್ಠಗಿ ಆಗ್ರಹಿಸಿದ್ದಾರೆ.