ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಗೆ ಹಬ್ಬ ಕಾರ್ಯಕ್ರಮ ಮೂಲಕ ಮತದಾನ ಕುರಿತು ಜಾಗೃತಿ

ಕಲಬುರಗಿ,ಮೇ.03:ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರು ಬುಧವಾರ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಗೆ ಹಬ್ಬ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಮತದಾನದ ಕುರಿತು ಅರಿವು ಮೂಡಿಸಿದರು.

  ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಇದೇ ಮೇ 10 ರಂದು ಸಾರ್ವಜನಿಕರು ತಪ್ಪದೇ ತಮ್ಮ ಮತ ಚಲಾಯಿಸಬೇಕು ಎಂದು ಹಾಡಿನ ಮೂಲಕ ಜನರಲ್ಲಿ ಮನವಿ ಮಾಡಿದರು. 
 ಪೋಸ್ಟರ್ ಬಿಡುಗಡೆ: ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ. ಬದೋಲೆ ಅವರು ಮತದಾನ ಕುರಿತು ಜಾಗೃತಿ ಮೂಡಿಸುವ ಪೋಸ್ಟ್‍ರ್‍ನ್ನು ಬಿಡುಗಡೆ ಮಾಡಿದರು. ನಂತರ ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೇಂದ್ರ ಬಸ್ ನಿಲ್ದಾಣದಿಂದ ವಿವಿಧ ಕಡೆ ಹೊರಡುವ ಬಸ್‍ಗಳಿಗೆ ಪೋಸ್ಟ್‍ರ್‍ನ್ನು ಅಂಟಿಸಲಾಯಿತು. 
  ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ. ಬದೋಲೆ ಅವರು ಎಲ್ಲರಿಗೂ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. 

ಕಲಬುರಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಉಪನಿರ್ದೇಶಕ ಅಬ್ದುಲ್ ಅಜೀಮ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಗಮದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ವಿ. ರೇವಣ್ಣ, ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ, ಕಾರ್ಮಿಕ ಕಲ್ಯಾಣ ಅಧಿಕಾರಿ ಶಂಕರಪ್ಪ, ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ಸೇರಿದಂತೆ ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬಸ್ ನಿಲ್ದಾಣದಲ್ಲಿ ನೆರೆದ ಜನರು ಇದ್ದರು.