ಕಲಬುರಗಿ ಕೇಂದ್ರ ಕಾರಾಗೃಹದಿಂದ ಕೈದಿ ಪರಾರಿ

ಕಲಬುರಗಿ:ಜ.4: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ಇಲ್ಲಿನ ಕೇಂದ್ರ ಕಾರಾಗೃಹದ ಮುಂಭಾಗದಲ್ಲಿರುವ ಹೊಲದಿಂದ ಪರಾರಿಯಾಗಿದ್ದಾನೆ.
ಎಂದಿನಂತೆ ಇಂದು ಬೆಳಗ್ಗೆ 8 ಗಂಟೆಗೆ ಕಾರಾಗೃಹದ ಜಮೀನಿನಲ್ಲಿ ತೊಗರಿ ರಾಶಿ ಮಾಡಲು ತೆರಳಿದ್ದ ಕೈದಿ ಸುಮಾರು 11 ಗಂಟೆ ಸುಮಾರಿಗೆ ತೊಗರಿಯ ಹೊಲದಿಂದಲೇ ಪರಾರಿಯಾಗಿದ್ದಾನೆ.

ಚಿಂಚೋಳಿಯ ರಮೇಶ್ (30) ಪರಾರಿಯಾದ ಕೈದಿ. 2012 ರಲ್ಲಿ ಚಿಂಚೋಳಿಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿ, 2014 ರ ವರೆಗೆ ವಿಚಾರಣಾಧೀನ ಕೈದಿಯಾಗಿ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ. ನಂತರ 2018 ರಲ್ಲಿ ನ್ಯಾಯಾಲಯ ಆರೋಪಿ ರಮೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆಗಿನಿಂದ ಜೈಲು ವಾಸಿಯಾಗಿದ್ದ ರಮೇಶ ಇಂದು ಪರಾರಿಯಾಗಿದ್ದಾನೆ. ಈ ಕುರಿತು ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೈದಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.