ಕಲಬುರಗಿ ಕಾರಾಗೃಹದಲ್ಲಿ ರಾಜ್ಯೋತ್ಸವ ಆಚರಣೆ:ಮನೆ-ಮನಗಳಲ್ಲಿ ಕನ್ನಡ ಪಸರಿಸಲಿ:ಕೆ.ಬಿ.ಪಾಟೀಲ

ಕಲಬುರಗಿ,ನ.1: ಕನ್ನಡವು ಪ್ರತಿ ಮನೆ-ಮನಗಳಲ್ಲಿ ಪಸರಿಸಬೇಕಿದೆ. ಮಾತೃ ನುಡಿಯ ಹಿರಿಮೆಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಬಿ. ಪಾಟೀಲ್ ಹೇಳಿದರು.
ಮಂಗಳವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಧೀಶ ಸುಶಾಂತ ಎಂ. ಚೌಗಲೇ ಮಾತನಾಡಿ, ಜೇನಿನ ಹನಿಯಷ್ಟು ಸಿಹಿ ಕೋಗಿಲೆಯ ದನಿಯಷ್ಟು ಸವಿ ನಮ್ಮ ಕನ್ನಡ ನುಡಿಯಾಗಿದೆ. ನುಡಿದರೆ ಮುತ್ತಿನ ಹಾರದಂತೆ ಇರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂದು ತಮ್ಮ ಮಾತಿನಲ್ಲಿ ಕನ್ನಡದ ಸವಿಯನ್ನು ಕೊಂಡಾಡಿದರು.
ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ಮಾತನಾಡುತ್ತಾ, ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಹಸಿರು. ಇತರೇ ಭಾಷೆ ಮಾತನಾಡುವವರನ್ನು ಕನ್ನಡ ಕಲಿಸಬೇಕು. ಕನ್ನಡ ಉಳಿಸಿ ಬೆಳಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರಾಗೃಹ ಅಧಿಕಾರಿ-ಸಿಬ್ಬಂದಿ ಹಾಗೂ ಬಂದಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಅಧೀಕ್ಷಕ ಬಿ.ಎಂ. ಕೊಟ್ರೇಶ್, ಸಹಾಯಕ ಅಧೀಕ್ಷಕ ವಿ.ಕೃಷ್ಣಮೂರ್ತಿ, ವೈದ್ಯಾಧಿಕಾರಿ ಡಾ. ರವೀಂದ್ರ ಬನ್ನೇರಿ, ಡಾ.ಅಣ್ಣಾರಾವ್ ಪಾಟೀಲ್, ಕೆ.ಎಸ್.ಐ.ಎಸ್.ಎಫ್ ಅಧಿಕಾರಿ ಕೆ. ಮಾರನೂರ, ಬಾಬು ಗುತ್ತೇದಾರ, ಜೈಲರ್ ವೃಂದದವರು, ವಕೀಲರು ಹಾಗೂ ಕಾರಾಗೃಹದ ಅಧಿಕಾರಿ/ಸಿಬ್ಬಂದಿಗಳು ಹಾಗೂ ಬಂಧಿಗಳು ಭಾಗವಹಿಸಿದರು.
ಮಾನಸಿಕ ಆಪ್ತ ಸಮಾಲೋಚಕಿ ಮಹಾದೇವಿ ಸ್ವಾಗತಿಸಿದರು. ಕು. ರುದ್ರವ್ವ ಪ್ರಾರ್ಥನಾ ಗೀತೆ ಹಾಡಿದರು. ಪುಂಡಲಿಂಗ ಹಳ್ಳೂರ ವಂದಿಸಿದರೆ, ಶಿಕ್ಷಕ ನಾಗಾರಾಜ ಮುಲಗೆ ನಿರೂಪಿಸಿದರು.