ಕಲಬುರಗಿ ಉಪ ರಾಜಧಾನಿ ಮಾಡುವಂತೆ ಹಾಗೂ ಸಚಿವ ಖರ್ಗೆಗೆ ಜಿಲ್ಲಾ ಉಸ್ತುವಾರಿ, ಪಾಟೀಲರಿಗೆ ಕೆಕೆಆರ್ ಡಿಬಿ ಅಧ್ಯಕ್ಷರಾಗಿ ನೇಮಕಕ್ಕೆ ಆಗ್ರಹ

ಕಲಬುರಗಿ:ಜೂ.9: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಕಲಬುರಗಿ ಉಪ ರಾಜಧಾನಿ ಮಾಡುವಂತೆ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜಿಲ್ಲಾ ಉಸ್ತುವಾರಿ ವಹಿಸಿ ಮತ್ತು ಇನ್ನೋರ್ವ ಸಚಿವ ಶರಣಪ್ರಕಾಶ ಪಾಟೀಲರನ್ನು ಕೆಕೆಆರ್ ಡಿಬಿ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲ್ಯಾಣ ಭಾಗದ ಅಭಿವೃದ್ಧಿಗೆ ಪೂರಕವಾದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಹಿಂದೆ ಶರಣಪ್ರಕಾಶ ಪಾಟೀಲ ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅನುಭವವಿದೆ.ಅನೇಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೆಕೆಆರ್ ಡಿಬಿಗೆ 5 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವ ಕುರಿತು ಭರವಸೆ ನೀಡಲಾಗಿದೆ.ಸಚಿವ ಶರಣಪ್ರಕಾಶ ಪಾಟೀಲ ಅವರು ಅಧ್ಯಕ್ಷರಾದರೆ ಅನುದಾನ ಪ್ರಾಮಾಣಿಕವಾಗಿ ಸದ್ಭಳಕೆಯಾಗಿ ಈ ಭಾಗ ಅಭಿವೃದ್ಧಿ ಹೊಂದುತ್ತದೆ ಎಂದ ಅವರು ಜಿಲ್ಲೆಯ ಯುವ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಜಿಲ್ಲಾ ಉಸ್ತುವಾರಿ ಹೊಣೆ ನೀಡಬೇಕು.ಅದರಂತೆ ಪ್ರೀಯಾಂಕ ಖರ್ಗೆ ಅವರು ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಲಬುರಗಿ ಉಪ ರಾಜಧಾನಿ ಮಾಡಿದರೆ ಕಚೇರಿಯ ಕೆಲಸಕ್ಕಾಗಿ ಈ ಭಾಗದ ಜನರು ದೂರದ ಬೆಂಗಳೂರಿಗೆ ತೆರಳಲು ತಪ್ಪುತ್ತದೆ.ಇದರಿಂದ ಸಮಯವೂ ಹಾಗೂ ಹಣ ಉಳಿತಾಯವಾಗುತ್ತದೆ.ಅಲ್ಲದೆ ರಾಜಧಾನಿಯಾದರೆ ಕಲಬುರ್ಗಿಯಲ್ಲಿ ಉಪ ಕಚೇರಿಗಳು ಸ್ಥಾಪನೆಯಾಗುತ್ತವೆ.ಇದರಿಂದ ಇಲ್ಲಿಯ ಜನರಿಗೆ ಅನುಕೂಲವಾಗುತ್ತದೆ.371ನೇ ಜೆ ಕಲಂ ಅನುಷ್ಠಾನಕ್ಕೆ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.