
ಕಲಬುರಗಿ.ಮಾ.23:ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರರನ್ನು ತಮ್ಮತ್ತ ಸೆಳೆಯಲು ಕ್ಷೇತ್ರ ಸಂಚಾರ ನಡೆಸುತ್ತಿರುವ ಶಾಸಕರುಗಳ ವಿರುದ್ಧ ಜನಾಕ್ರೋಶ ಮುಂದುವರೆದಿದೆ.
ಜೇವರ್ಗಿ, ಗ್ರಾಮೀಣ ಶಾಸಕರ ನಂತರ ಇದೀಗ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾಗೆ ಮತದಾರರು ಬಿಸಿ ಮುಟ್ಟಿಸಿದ್ದಾರೆ. ಗೋ ಬ್ಯಾಕ್ ಖನೀಜ್ ಫಾತಿಮಾ ಎಂದು ಮಹಿಳೆಯರು ಪ್ರತಿಭಟನಾ ರ್‍ಯಾಲಿ ಮಾಡಿದ್ದಾರೆ.
ಉತ್ತರ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ನಿರ್ಣಾಯಕ ಮತಗಳಿದ್ದು ಖನೀಜ್ ಫಾತಿಮಾ ವಿರುದ್ಧ ಅಲ್ಪಸಂಖ್ಯಾತ ಮಹಿಳೆಯರು ಸೇರಿ ಅನೇಕರು ಸೇರಿ ಗೋ ಬ್ಯಾಕ್ ರ್‍ಯಾಲಿ ನಡೆಸಿದರು. ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿಲ್ಲ, ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಶಾಸಕಿ ವಿರುದ್ದ ಕ್ಷೇತ್ರದ ವಾರ್ಡ್ ಸಂಖ್ಯೆ 27ರಲ್ಲಿ 100 ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟಿಸಿದ್ದಾರೆ.
ಅಲ್ಲದೇ ಖನೀಜ್ ಫಾತಿಮಾಗೆ ಈ ಬಾರಿ ಟಿಕೆಟ್ ನೀಡಬಾರದು. ಅವರ ಬದಲಾಗಿ ಪುರುಷ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮಹಿಳೆಯರು ಆಗ್ರಹಿಸಿದ್ದಾರೆ. ಖನೀಜ್ ಫಾತಿಮಾಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌ಗೆ ಮತವನ್ನು ಹಾಕಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಈ ಹಿಂದೆ ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯಸಿಂಗ್ ಸುಂಬಡ್ ಅವರಿಗೆ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲಾ ಉದ್ಘಾಟನಾ ಸಮಾರಂಭದ ವೇದಿಕೆ ಮೇಲೆಯೇ ಗ್ರಾಮದ ವ್ಯಕ್ತಿಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದರು.
ನೀವು ನಿಮ್ಮ ತಂದೆ ಈ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಬಹಿರಂಗವಾಗಿ ಪ್ರಶ್ನಿಸಿ ಶಾಸಕರು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದರು. ಬಳಿಕ ವೇದಿಕೆ ಮೇಲಿದ್ದ ಶಾಸಕರ ಬೆಂಬಲಿಗರು, ಮುಖಂಡರು ವ್ಯಕ್ತಿಯನ್ನು ವೇದಿಕೆ ಮೇಲಿಂದ ಒತ್ತಾಯದಿಂದ ಕರೆದೊಯ್ದರು.
ಇತ್ತೀಚೆಗೆ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಅವರು ಮುಜುಗರಕ್ಕೊಳಗಾದ ಘಟನೆ ನಡೆದಿತ್ತು. ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ನರೋಣಾ ಗ್ರಾಮದ ಸಮಾರಂಭವೊಂದಕ್ಕೆ ತೆರಳಿ ಮತದಾರರನ್ನು ಸೆಳೆಯಲು ಮುಂದಾದ ಶಾಸಕ ಮತ್ತಿಮೂಡ ವಿರುದ್ಧ ಗ್ರಾಮದ ಕೆಲ ಮಹಿಳೆಯರು ಯುವಕರು ಪ್ರತಿಭಟನೆ ನಡೆಸಿದ್ದರು.
ನೀರು ಸರಬರಾಜು, ಚರಂಡಿ ವ್ಯವಸ್ಥೆಗಾಗಿ ಶಾಸಕರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಇದರಿಂದಾಗಿ ಗ್ರಾಮದಲ್ಲಿ ಒಂದು ಕ್ಷಣ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಶಾಸಕರು ಸ್ಥಳದಿಂದ ತೆರಳಿದ ಬಳಿಕ ಆಕ್ರೋಶ ತಣ್ಣಗಾಗಿತ್ತು.