ಕಲಬುರಗಿ ಉತ್ತರ-ದಕ್ಷಿಣ ಕ್ಷೇತ್ರದಲ್ಲಿ 6ಕಿ.ಮೀ ಭರ್ಜರಿ ರೋಡ್ ಶೋ ನಾಳೆ ನಗರಕ್ಕೆ ಪ್ರಧಾನಿ ಮೋದಿ;ವ್ಯಾಪಕ ಸಿದ್ಧತೆ

ಮಹೇಶ್ ಕುಲಕರ್ಣಿ
ಕಲಬುರಗಿ,ಮೇ 1: ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ಉತ್ತರ ಮತ್ತು
ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಾದ ಚಂದು ಪಾಟೀಲ್ ಹಾಗೂ
ದತ್ತಾತ್ರೇಯ ಸಿ.ಪಾಟೀಲ್ ರೇವೂರ್ ಪರವಾಗಿ ಪ್ರಚಾರ ಕೈಗೊಳ್ಳಲು ನಾಳೆ (ಮೇ
2ರಂದು) ಸಂಜೆ 4ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ
ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಳೆ ಸಂಜೆ ಸುಮಾರು 4ರ ವೇಳೆಗೆ ಪ್ರಧಾನಿ ಮೋದಿ ಅವರನ್ನು ಹೊತ್ತ ಮೂರು
ಸೇನಾ ಹೆಲಿಕಾಪ್ಟರ್‍ಗಳು ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನ ಸಮೀಪದ
ಹೆಲಿಪ್ಯಾಡ್‍ಗೆ ಬಂದಿಳಿಯಲ್ಲಿದ್ದು, ಅಲ್ಲಿಂದ ಪ್ರಧಾನಿ ಮೋದಿ ವ್ಯಾಪಕ ಭದ್ರತಾ
ವ್ಯವಸ್ಥೆಯಲ್ಲಿ ಕೆಎಂಎಫ್ ಕಚೇರಿ ಎದುರಿನ ರಸ್ತೆ ತಲುಪಲಿದ್ದಾರೆ. ಬಳಿಕ ಸಂಜೆ 5ಕ್ಕೆ
ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಎಂಎಫ್ ಎದುರಿನಿಂದ ಪ್ರಧಾನಿ
ಮೋದಿಯವರ ರೋಡ್ ಶೋ ಆರಂಭಗೊಳ್ಳಿದ್ದು, ಅವರು ತೆರೆದ ವಾಹನದಲ್ಲಿ
ಉಭಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಲಿದ್ದಾರೆ. ಇನ್ನು, ಉತ್ತರ
ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕಿ.ಮೀ ರ್ಯಾಲಿ ನಡೆಸಲಿರುವ
ಪ್ರಧಾನಿ ಮೋದಿ ಅವರ ರ್ಯಾಲಿಯ ಕಳೆ ಹೆಚ್ಚಿಸುವ ವಿವಿಧ ಕಲಾ ತಂಡಗಳು
ರಸ್ತೆಯುದ್ದಕ್ಕೂ ತಮ್ಮ ಕಲಾ ಪ್ರದರ್ಶನ ನೀಡಲಿವೆ.
ಕಲಬುರಗಿ ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು
ಪ್ರಧಾನಿ ಮೋದಿಯವರು ನಡೆಸಲಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದರೂ,
ಯಾರೊಬ್ಬರಿಗೂ ಮೋದಿ ಇರುವ ತೆರೆದ ವಾಹನ ಏರಲು ಅವಕಾಶ ಇರುವುದಿಲ್ಲ ಎಂದು
ಬಿಜೆಪಿಯ ಹಿರಿಯ ಮುಖಂಡರೊಬ್ಬರು ಖಚಿತಪಡಿಸಿದರು.
** ನಗರ ಅಲಂಕಾರ ಆರಂಭ:
ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಭಾರತೀಯ ಜನತಾ
ಪಕ್ಷದ ವತಿಯಿಂದ ನಗರದ ಕೆಎಂಎಫ್ ಕಚೇರಿ ಎದುರಿನ ರಸ್ತೆಯಿಂದ ಹಿಡಿದು ಎಸ್‍ವಿಪಿ
ವೃತ್ತದವರೆಗೆ ಅಲ್ಲಲ್ಲಿ ಬಿಜೆಪಿಯ ಕಮಲ ಚಿಹ್ನೆಯ ಬೃಹತ್ ಕಟೌಟ್
ಅಳವಡಿಸಲಾಗುತ್ತಿದೆ. ಇದರ ಜೊತೆಗೆ, ಬಿಜೆಪಿಯ ಬಾವುಟಗಳನ್ನು ಸಹ
ಕಟ್ಟಲಾಗುತ್ತಿದ್ದು, ನಗರಕ್ಕೆ ಮದುವಣಗಿತ್ತಿಯ ಕಳೆ ನೀಡುವ ಎಲ್ಲ
ಯತ್ನಗಳನ್ನು ಪಕ್ಷದ ಜಿಲ್ಲಾ ಘಟಕ ಕೈಗೊಳ್ಳುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ
ಸುಮಾರು 2 ಲಕ್ಷಕ್ಕೂ ಅಧಿಕ ಜನರು ಜಮಾ ಆಗುವುದರಿಂದ ಪೊಲೀಸ್ ಇಲಾಖೆ ವ್ಯಾಪಕ
ಭದ್ರತಾ ವ್ಯವಸ್ಥೆ ಕೈಗೊಳ್ಳುತ್ತಿದೆ.


ದೇಶಭಕ್ತಿ ಗೀತೆಗಳ ಅನುರಣನ
ಕಲಬುರಗಿ ನಗರದ ಗಂಜ್ ಸಮೀಪದ ಕೆಎಂಎಫ್ ಕಚೇರಿ ಎದುರಿನ ರಸ್ತೆಯಿಂದ ಹಿಡಿದು
ಎಸ್‍ವಿಪಿ ವೃತ್ತದವರೆಗೆ ಪ್ರಧಾನಿ ನರೇಂದ್ರ ಮೋದಿಯವರು ನಾಳೆ ರೋಡ್ ಶೋ
ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ 400 ಮೀಟರ್‍ಗೆ ಒಂದರಂತೆ ಬೃಹತ್
ಧ್ವನಿವರ್ಧಕಗಳನ್ನು ಬಿಜೆಪಿಯ ಜಿಲ್ಲಾ ಮತ್ತು ನಗರ ಘಟಕದ ವತಿಯಿಂದ
ಅಳವಡಿಸಲಾಗುತ್ತಿದೆ.ರೋಡ್ ಶೋ ನಡೆಯುವ ಹಾದಿಯುದ್ಧಕ್ಕೂ ದೇಶಭಕ್ತಿ ಗೀತೆಗಳ ಅನುರಣನ ವ್ಯಾಪಿಸುವಂತೆ ನೋಡಿಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಈಗಾಗಲೇ
ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.