
ಮಹೇಶ್ ಕುಲಕರ್ಣಿ
ಕಲಬುರಗಿ:ಏ.26: ಮುಸ್ಲಿಂ ಮತ್ತು ಲಿಂಗಾಯತ ಮತದಾರರು ನಿರ್ಣಾಯಕರಾಗಿರುವ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕ್ಷೇತ್ರವು ಕದನ ಕುತೂಹಲಕ್ಕೆ ಹಾದಿ ಮಾಡಿಕೊಟ್ಟಿದೆ.
ಕಾಂಗ್ರೆಸ್ ಪಕ್ಷದ ಹಾಲಿ ಶಾಸಕಿ ಕನೀಜ್ ಫಾತಿಮಾ, ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ (ಚಂದು) ಪಾಟೀಲ್ ಮತ್ತು ಜೆಡಿಎಸ್ ಅಭ್ಯರ್ಥಿ ನಾಸಿರ್ ಹುಸೇನ್ ಉಸ್ತಾದ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಲಿಂಗಾಯತ ಹಾಗೂ ಮುಸ್ಲಿಂ ಮತಗಳ ಕ್ರೋಢೀಕರಣದ ಆಧಾರದ ಮೇಲೆ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅದೃಷ್ಟ ನಿರ್ಧಾರ ಆಗಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನೀಜ್ ಫಾತಿಮಾ ಮತ್ತು ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಮತ್ತೊಂದೆಡೆ, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದ ನಾಸಿರ್ ಹುಸೇನ್ ಉಸ್ತಾದ್ 14,422 ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದೇವೇಳೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದ ವಹಾಜ್ ಬಾಬಾ 7166 ಮತಗಳನ್ನು ಪಡೆದಿದ್ದರು. ಆದರೆ, ಈ ಬಾರಿ ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಮುಸ್ಲಿಂ ಮತಗಳು ಹೇಗೆ ಹಂಚಿಕೆ ಆಗಲಿವೆ ಎನ್ನುವುದರ ಆಧಾರದ ಮೇಲೆ ಕ್ಷೇತ್ರದ ಫಲಿತಾಂಶ ನಿರ್ಧಾರ ಆಗಲಿದೆ ಎನ್ನಲಾಗುತ್ತಿದೆ.
ಈ ಮಧ್ಯೆ, ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಲಿಂಗಾಯತ ಮತಗಳನ್ನು ಹೊರತುಪಡಿಸಿ, ದಲಿತ, ಲಂಬಾಣಿ, ಕೋಲಿ-ಕಬ್ಬಲಿಗ, ಕುರುಬ ಮತಗಳು ಕೂಡ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಜೊತೆಗೆ, ಮರಾಠ, ಬ್ರಾಹ್ಮಣ, ವಾಸವಿ, ಜೈನ ಸಮುದಾಯದ ಮತದಾರರು ಕೂಡ ಕ್ಷೇತ್ರದಲ್ಲಿದ್ದು, ಈ ಸಮುದಾಯದ ಮತಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತೋರುವ ಮುತುವರ್ಜಿ ಸಕಾರಾತ್ಮಕ ಫಲಿತಾಂಶಕ್ಕೆ ಹಾದಿ ಮಾಡಿಕೊಡಲಿದೆ ಎಂದು ಹಿರಿಯ ಮರಾಠ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.
ಕಾಂಗ್ರೆಸ್-ಜೆಡಿಎಸ್ ಪಾಲಿಗೆ ಆಪ್-ಮುಸ್ಲಿಂ ಲೀಗ್ ಆತಂಕ
ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಸೈಯದ್ ಸಜ್ಜಾದ್ ಅಲಿ ಮತ್ತು ಅಖಿಲ ಭಾರತೀಯ ಮುಸ್ಲಿಂ ಲೀಗ್ (ಸೆಕ್ಯುಲರ್) ಪಕ್ಷದಿಂದ ಅಬ್ದುಲ್ ಹಮೀದ್ ಹಾಜಿ ಮೊಹ್ಮದ್ ಕಣದಲ್ಲಿದ್ದಾರೆ. ಹಾಗಾಗಿ, ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್, ಜೆಡಿಎಸ್, ಆಪ್ ಮತ್ತು ಮುಸ್ಲಿಂ ಲೀಗ್ ಅಭ್ಯರ್ಥಿಗಳ ಮಧ್ಯೆ ಹೇಗೆ ಹಂಚಿಕೆ ಆಗಬಹುದು ಎಂಬುದರ ಕುರಿತು ಕ್ಷೇತ್ರದ ಮತದಾರರಲ್ಲಿ ಕುತೂಹಲ ಮೂಡಿಸಿದೆ.
ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವುದರಿಂದ ಈ ಇಬ್ಬರ ಪೈಕಿ ಯಾರು ಹೆಚ್ಚಿನ ಮುಸ್ಲಿಂ ಮತಗಳನ್ನು ಆಕರ್ಷಿಸಲಿದ್ದಾರೆ ಎಂಬುದರ ಕುರಿತು ಕ್ಷೇತ್ರದಾದ್ಯಂತ ಮತದಾರರು ತಮ್ಮ ತಮ್ಮ ಅಂದಾಜಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹೀಗಿರುವಾಗ, ಆಪ್ ಮತ್ತು ಮುಸ್ಲಿಂ ಲೀಗ್ ಅಭ್ಯರ್ಥಿಗಳು ಕೂಡ ಕಣದಲ್ಲಿರುವ ಹಿನ್ನೆಲೆಯಲ್ಲಿ ಈ ಇಬ್ಬರೂ ಎಷ್ಟು ಪ್ರಮಾಣದಲ್ಲಿ ಮುಸ್ಲಿಂ ಮತಗಳನ್ನು ಆಕರ್ಷಿಸಲಿದ್ದಾರೆ ಎಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಯ ತಲೆನೋವು ಹೆಚ್ಚಿಸಬಹುದು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.