ಕಲಬುರಗಿ ಉಚ್ಛ ನ್ಯಾಯಾಲಯ ಪೀಠಕ್ಕೆ ಸ್ಥಳೀಯರಿಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ನೇಮಕಾತಿಗೆ ಒತ್ತಾಯ

ಕಲಬುರಗಿ.ಮೇ.24: ನಮ್ಮ ಭಾಗದವರಿಗೆ ಕಲಬುರಗಿ ಉಚ್ಛ ನ್ಯಾಯಾಲಯ ಪೀಠಕ್ಕೆ ಹೆಚ್ಚುವರಿ ಅಡ್ವೋಕೇಟ್ ಜನರಲ್‍ರಾಗಿ ನೇಮಕ ಮಾಡಬೇಕು ಎಂದು ಗುಲಬರ್ಗಾ ನ್ಯಾಯವಾದಿಗಳ ಸಂಘದ ಉಚ್ಛ ನ್ಯಾಯಾಲಯ ಘಟಕದ ಅಧ್ಯಕ್ಷ ಗುಪ್ತಲಿಂಗ್ ಎಸ್. ಪಾಟೀಲ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಂಘದ ಕಾರ್ಯಕಾರಿ ಸಭೆಯು ಜರುಗಿತು. ರಾಜ್ಯದಲ್ಲಿ 2023ರ ಸಾರ್ವತ್ರಿಕ ಚುನಾವಣೆಯಾಗಿ ನೂತನ ಸರ್ಕಾರ ರಚನೆಯಾಗಿದ್ದು, ರಾಜ್ಯದ ನಿಕಟಪೂರ್ವ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಕಲಬುರ್ಗಿ ಪೀಠಕ್ಕೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಹುದ್ದೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ವೃತ್ತಿಪರ ವಕೀಲರನ್ನು ನೇಮಿಸದೇ ಅನ್ಯಾಯ ಎಸಗಿತ್ತು. ಈ ವಿಷಯದಲ್ಲಿ ಹಿಂದಿನ ಸರ್ಕಾರಕ್ಕೆ ಹಿಂದಿನ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ, ನಮ್ಮ ಭಾಗದವರನ್ನೇ ಸ್ಥಳೀಯ ಉಚ್ಛ ನ್ಯಾಯಾಲಯ ಪೀಠಕ್ಕೆ ಅಡ್ವೋಕೇಟ್ ಜನರಲ್‍ರಿಗೆ ನೇಮಕ ಮಾಡಲು ಕೋರಿದರೂ ಸಹ ಅದಕ್ಕೆ ಸ್ಪಂದಿಸಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಹೀಗಾಗಿ ಸಭೆಯಲ್ಲಿ ನೂತನ ಮುಖ್ಯಮಂತ್ರಿಗಳಿಗೆ, ನೂತನ ಉಪ ಮಖ್ಯಮಂತ್ರಿಗಳಿಗೆ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಗೆ ಮತ್ತು ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿರುವ ಶಶಿಕಿರಣ್ ಶೆಟ್ಟಿಯವರಿಗೆ ಸಂಘದ ಪರವಾಗಿ ಕಲ್ಯಾಣ ಕರ್ನಾಟಕ ಭಾಗದ ವಕೀಲರನ್ನು ಅಥವಾ ಕಲಬುರ್ಗಿ ಪೀಠದ ವ್ಯಾಪ್ತಿಗೆ ಬರುವ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ವೃತ್ತಿಪರ ವಕೀಲರನ್ನು ನೇಮಕ ಮಾಡುವಂತೆ ಮನವಿ ಪತ್ರ ಸಲ್ಲಿಸಲು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಒಂದು ವೇಳೆ ಮನವಿಗೆ ಸ್ಪಂದಿಸದೇ ಹೋದಲ್ಲಿ ಪೀಠದ ವ್ಯಾಪ್ತಿಯಲ್ಲಿ ಬರುವ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ಎಲ್ಲ ವಕೀಲರ ಸಂಘಗಳ ಬೆಂಬಲದೊಂದಿಗೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲೂ ಸಹ ಸಭೆಯು ನಿರ್ಧರಿಸಿದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಎಚ್. ಪಾಟೀಲ್, ಉಪಾಧ್ಯಕ್ಷ ಅಶೋಕ್ ಬಿ. ಮೂಲಗೆ, ಖಜಾಂಚಿ ಶರಣಕುಮಾರ್ ಜಿ. ಮಠ್ ಮುಂತಾದವರು ಉಪಸ್ಥಿತರಿದ್ದರು.