ಕಲಬುರಗಿ ಆಕಾಶವಾಣಿ ನಾಟಕ ವಿಭಾಗದ :ಶಂಕ್ರಯ್ಯ ಆರ್. ಘಂಟಿ, ಸೋಮಶೇಖರ ಎಸ್. ರುಳಿ,ಶೋಭಾ ಪಾಟೀಲ್ ‘ಎ’ ದರ್ಜೆಗೆ ಬಡ್ತಿ

ಕಲಬುರಗಿ.ಮಾ.19:ಪ್ರಸಾರಭಾರತಿಯ ನಿರ್ದೇಶನದಂತೆ ಕಲಬುರಗಿ ಆಕಾಶವಾಣಿ ಕೇಂದ್ರದ ನಾಟಕ ವಿಭಾಗದ ‘ಬಿ’ ದರ್ಜೆಯಿಂದ ‘ಎ’ ದರ್ಜೆ ಹಾಗೂ ‘ಎ’ ದರ್ಜೆಯಿಂದ ‘ಎ’ ಟಾಪ್ ದರ್ಜೆಗೆ ನಡೆಸಿದ ಕಲಾವಿದರ ಧ್ವನಿ ಪರೀಕ್ಷಯಲ್ಲಿ ‘ಬಿ’ ಹೈ ದರ್ಜೆಯಲ್ಲಿದ ಹಿರಿಯ ರಂಗಕರ್ಮಿ ಶಂಕ್ರಯ್ಯ ಆರ್. ಘಂಟಿ, ಸೋಮಶೇಖರ ಎಸ್. ರುಳಿ ಹಾಗೂ ಶೋಭಾ ಪಾಟೀಲ್ ‘ಎ’ ದರ್ಜೆ ಕಲಾವಿದರಾಗಿ ಬಡ್ತಿ ಹೊಂದಿದ್ದಾರೆ.
ನವದೆಹಲಿಯ ಆಕಾಶವಾಣಿ ನಾಟಕ ವಿಭಾಗದ ತಜ್ಞರ ತಂಡವು ಈ ಮೂವರನ್ನು ಆಯ್ಕೆ ಮಾಡಿದೆ. ಇದರಿಂದಾಗಿ ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ‘ಬಿ’ ಹೈಯಿಂದ ‘ಎ’ ದರ್ಜೆ ಧ್ವನಿ ಪರೀಕ್ಷೆಗೆ ಹಾಜರಾದ 19 ಕಲಾವಿದರಲ್ಲಿ ಮೂವರು ಮಾತ್ರ ಆಯ್ಕೆಯಾಗಿದ್ದಾರೆ ‘ಎ’ ದರ್ಜೆಯಿಂದ ‘ಎ’ ಟಾಪ್‍ಗೆ ಹಾಜರಾದ ಯಾರೊಬ್ಬರು ಆಯ್ಕೆಗೊಂಡಿಲ್ಲ ಎಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.
ನಾಟಕ ವಿಭಾಗದ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಕಾರ್ಯಕ್ರಮ ನಿರ್ವಾಹಕರು ಹಾಗೂ ಸಂಯೋಜಕರಾದ ಅನಿಲಕುಮಾರ ಎಚ್. ಎನ್. ಹಾಗೂ ಉದ್ಘೋಷಕಿ ಶಾರದಾ ಜಂಬಲದಿನ್ನಿ ಅವರ ಉಪಸ್ಥಿತಿಯಲ್ಲಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.