ಕಲಬುರಗಿ ‘ಆಕಾಶವಾಣಿಗೆ ತಾಯಿ – ಗುರುವಿನ ಸ್ಥಾನ’

ಕಲಬುರಗಿ:ನ.11: ಆಕಾಶವಾಣಿ ಕಲಬುರಗಿ ಕೇಂದ್ರವು ಕೇಳುಗರ ಪಾಲಿಗೆ ತಾಯಿ ಮತ್ತು ಗುರುವಿನ ಸ್ಥಾನ ಹೊಂದಿ ಶಿಕ್ಷಣ, ಮಾಹಿತಿ ಮತ್ತು ಮನರಂಜನೆ ನೀಡುತ್ತಿದೆ ಎಂದು ಕಲ್ಯಾಣ ಕರ್ನಾಟಕ ಭಾಗದ ಕೇಳುಗರು ಮುಕ್ತ ಅನಿಸಿಕೆ ಹಂಚಿಕೊಂಡರು.
ಕಲಬುರಗಿ ಆಕಾಶವಾಣಿಯ 56ನೇ ಸಂಸ್ಥಾಪನಾ ದಿನದಂಗವಾಗಿ ನ.11 ರಂದು ಕೇಳುಗರಿಗಾಗಿ ಏರ್ಪಡಿಸಿದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ‘ಸುವರ್ಣ ಹೆಜ್ಜೆಯ ಹಾದಿಯಲಿ ಆಕಾಶವಾಣಿ’ ಸಂವಾದದಲ್ಲಿ ಕೇಳುಗರು ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಶುದ್ಧ ಮಾಧ್ಯಮವಾಗಿ 56 ವರ್ಷಗಳಿಂದ ಈ ಭಾಗದ ಸಾಂಸ್ಕøತಿಕ, ಸಾಹಿತ್ಯಿಕ, ಕೃಷಿ, ಲಲಿತ ಕಲೆ, ವಿಜ್ಞಾನ, ಜಾನಪದ ಮುಂತಾದ ಹಲವು ಕ್ಷೇತ್ರಗಳಲ್ಲಿ ಬೆಳೆಯಲು ಶ್ರವ್ಯ ಮಾಧ್ಯಮವಾಗಿ ತನ್ನ ವಿಶಿಷ್ಟ ಕೊಡುಗೆ ನೀಡಿದೆ. ಸಾವಿರಾರು ಬರಹಗಾರರ ಸೃಷ್ಟಿಗೆ ಕೂಡಾ ಕಾರಣಕರ್ತವಾದ ಬಾನುಲಿ ಇಂದಿಗೂ ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನೆ ಮನೆಗೂ ಮನ ಮನಕ್ಕೂ ಮುಟ್ಟಿದೆ ಎಂದು ಶ್ಲಾಘಿಸಿದರು.
ಕೇಳುಗರ ಅಭಿಪ್ರಾಯಕ್ಕೆ ನಿಲಯದ ಮುಖ್ಯಸ್ಥರಾದ ಜಿ. ಗುರುಮೂರ್ತಿ ಉತ್ತರಿಸುತ್ತಾ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ರಾಷ್ಟ್ರದ ಪ್ರಮುಖ ಕೆಲವೇ ಕೆಲವು ಬಾನುಲಿಗಳಂತೆ ಕಲಬುರಗಿ ಆಕಾಶವಾಣಿಯೂ ಕೂಡಾ ಕಾರ್ಯಾಚರಿಸುತ್ತಿದೆ. ವಿನೂತನ ಕಾರ್ಯಕ್ರಮಗಳನ್ನು ಕೇಳುಗರಿಗೆ ನೀಡಿ ಶಿಕ್ಷಣ, ಮಾಹಿತಿ ಮತ್ತು ಮನರಂಜನೆ ನೀಡುವ ಆಕಾಶವಾಣಿಗೆ ಶ್ರೋತೃ ವೃಂದದ ಬೆಂಬಲ ಸದಾ ಇರಲಿ ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕರಾದ ಅನಿಲ್ ಕುಮಾರ್ ಎಚ್. ಎನ್. ಶುಭ ಕೋರಿ ಮಾತನಾಡಿದರು. ಡಾ. ಸದಾನಂದ ಪೆರ್ಲ, ಶಾರದಾ ಜಂಬಲದಿನ್ನಿ ಮತ್ತು ಸಂಗಮೇಶ್ ಕಾರ್ಯಕ್ರಮ ನಡೆಸಿಕೊಟ್ಟರು.
ಶಿವಮೊಗ್ಗ ಶಿಕಾರಿಪುರದ ಮಹೇಶ್, ಕಲಬುರಗಿಯ ಅಂಬಾರಾಯ ಕೋಣೆ, ತಿಲಕ್ ನಗರದ ಭೀಮಸೇನ್ ರಾವ್ ಕುಲಕರ್ಣಿ, ಇಂಡಿ ತಾಲೂಕು ಚಣೇಗಾಂವದ ಭಾರತಿ, ಬೀದರ್‍ನ ಮಲ್ಲಮ್ಮ, ಹುಲಸೂರಿನ ಸಂಗಮೇಶ ಸಜ್ಜನ, ಬೆಂಗಳೂರಿನ ಹನುಮಂತ ಎಸ್ ಪೂಜಾರಿ, ಯಾದಗಿರಿ ಹೊಸಹಳ್ಳಿಯ ಗುರುಲಿಂಗಪ್ಪ, ಅಳಂದದ ವಿಠಲ ಭೀಮಸಾಗರ್, ಮಡಿವಾಳಯ್ಯ ಸ್ವಾಮಿ ಕೊರಳ್ಳಿ, ಜೇವರ್ಗಿಯ ಸಾಜನ್ ಪಟೀಲ್ ಸಂವಾದ ನಡೆಸಿದರು. ಅಂಕೋಲ ಉದಯ ಶಶಿಯ ಸಂಗೀತ ಕಲಾವಿದರಾದ ಮನಮೋಹನ ಮತ್ತು ಸಿಂಧಗಿ ತಾಲೂಕಿನ ಹೊನ್ನಳ್ಳಿಯ ನ್ಯಾಮತ್ ಬಾಷಾ, ಎಂ ಹುಣಚ್ಯಾಳ ಅವರು ಆಕಾಶವಾಣಿಯ ಕುರಿತಾಗಿ ಹಾಡನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮಕ್ಕೆ ಫೆಬಿ ಶೇಖರ್, ಪ್ರಭು ನಿಷ್ಠಿ, ಅನಿಲ್ ಕುಮಾರ್, ನೀರಜಾ ಕಾರಟಗಿ, ಮಧುದೇಶಮುಖ್ ನೆರವಾದರು. ನಂತರ ನಿಲಯದ ಎಲ್ಲ ಸಿಬ್ಬಂದಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿತಿಂಡಿ ಹಂಚಿ ಸಂಸ್ಥಾನ ದಿನವನ್ನು ಆಚರಿಸಲಾಯಿತು. ನಿವೃತ್ತ ಕಾರ್ಯಕ್ರಮ ಅಧಿಕಾರಿ ರಾಜೇಂದ್ರ ಕುಲಕರ್ಣಿ ಕೂಡಾ ಹಾಜರಿದ್ದರು.