ಕಲಬುರಗಿ: ಅಪ್ಪನ ಕೆರೆ ಸ್ವಚ್ಛತೆ

ಕಲಬುರಗಿ,ಜೂ.21-ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ) ಸ್ವಚ್ಛತಾ ಕಾರ್ಯ ಭರದಿಂದ ನಡೆದಿದೆ. ಮಹಾನಗರ ಪಾಲಿಕೆ ಕೆರೆ ಸ್ವಚ್ಛತೆಗೆ ಮುಂದಾಗಿದ್ದು, ಕರೆಯ ದಡದಲ್ಲಿ ಬೆಳೆದ ಮುಳ್ಳುಕಂಟಿ ಕಡೆದು ಹಾಕುವ, ಹುಲ್ಲನ್ನು ಕಿತ್ತು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಕೆರೆಯ ದಡದ ಸುತ್ತಲೂ ಎಸೆಯಲಾದ ಪ್ಲಾಸ್ಟಿಕ್, ಅರಿವೆ, ಬಟ್ಟೆ ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ. ಮಹಾನಗರ ಪಾಲಿಕೆಯ ಸುಮಾರು 60 ರಿಂದ 70 ಜನ ಪೌರ ಕಾರ್ಮಿಕರು ಕಳೆದ ಕೆಲ ದಿನಗಳಿಂದ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹೂಳೆತ್ತುವ ಕಾರ್ಯ ನಡೆಯಲಿ
ಕೆರೆ ಸ್ವಚ್ಛಗೊಳಿಸಿದರಷ್ಟೇ ಸಾಲದು ಕೆರೆಯಲ್ಲಿ ತುಂಬಿರುವ ಹೂಳೆತ್ತುವ ಕೆಲಸವೂ ನಡೆಯಲಿ. ಕೆರೆಯಲ್ಲಿನ ಹೂಳೆತ್ತಿದರೆ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಲು ಅನುಕೂಲವಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಹೀಗಾಗಿ ಕೆರೆಯ ಹೂಳೆತ್ತುವ ಕೆಲಸವೂ ನಡೆಯಬೇಕಿದೆ ಎಂಬುದು ಜನರ ಆಗ್ರಹವಾಗಿದೆ.
ನೆನೆಗುದಿಗೆ ಬಿದ್ದ ಕೆರೆ ಅಭಿವೃದ್ಧಿ
ಕೆರೆ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದೆ. 10 ಕೋಟಿ ರೂ.ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ ಕಾಮಗಾರಿ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಬೇಸಿಗೆ ಕಳೆದರೂ ಕೆರೆ ಸೌಂದರ್ಯೀಕರಣ ಕಾಮಗಾರಿ ಆಗಿಲ್ಲ. ಕೆರೆಗೆ ಹತ್ತಿಕೊಂಡಂತೆ ಇರುವ ಉದ್ಯಾನವನವೂ ಸಂಪೂರ್ಣ ಹಾಳಾಗಿ ಹೋಗಿದೆ. ಕೆರೆ ಸೌಂದರ್ಯೀಕರಣದ ಜೊತೆಗೆ ಉದ್ಯಾನವನವನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಜನರ ಒತ್ತಾಯವಾಗಿದೆ.