ಕಲಬುರಗಿ: ಅಗ್ನಿ ಶಾಮಕದಳ ಅವಾಂತರ !

ಕಲಬುರಗಿ,ಏ.2-ಅಗ್ನಿಶಾಮಕ ದಳ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ತುರ್ತು ಸಂಪರ್ಕವಾಗಿ ಅನಾಮಿಕ ವ್ಯಕ್ತಿಯೊಬ್ಬರ 08971205146 ಮೊಬೈಲ್ ನಂಬರ್ ನಮೂದಿಸುವ ಮೂಲಕ ಅವಾಂತರಕ್ಕೆ ಎಡೆಮಾಡಿಕೊಟ್ಟಿದೆ.
ಅಗ್ನಿ ಅವಘಡದಂತಹ ಅನಾಹುತಗಳ ಸಂದರ್ಭದಲ್ಲಿ ಜನ ಈ ನಂಬರ್‍ಗೆ ಕರೆ ಮಾಡಿದರೆ ಕರೆ ಸ್ವೀರಿಸುವ ವ್ಯಕ್ತಿ ಕಿರಿಕಿರಿ ಅನುಭವಿಸುವಂತಾಗಿದೆ. “ತಾನೊಬ್ಬ ಕಾರ್ಮಿಕನಾಗಿದ್ದು, ಈ ನಂಬರ್ ಅಗ್ನಿಶಾಮಕದಳ ವೆಬ್‍ಸೈಟ್‍ನಲ್ಲಿ ಯಾರು ನಮೂದಿಸಿದ್ದಾರೋ ನನಗೆ ಗೊತ್ತಿಲ್ಲ, ಇದು ಅಗ್ನಿಶಾಮಕ ದಳ ನಂಬರ್ ಅಲ್ಲ” ಎಂದು ಕರೆ ಮಾಡಿದವರಿಗೆ ಹೇಳುತ್ತ ಕೂರುವಂತಾಗಿದೆ.
ಕಳೆದ 3-4 ವರ್ಷಗಳಿಂದ ಅಗ್ನಿಶಾಮಕದಳ ವೆಬ್‍ಸೈಟ್‍ನಲ್ಲಿರುವ ಅನಾಮಿಕ ವ್ಯಕ್ತಿಯೊಬ್ಬರ ಮೊಬೈಲ್ ನಂಬರ್ ಬದಲಾಯಿಸಿ ಅಧಿಕೃತ ನಂಬರ್ ನಮೂದಿಸಲು ಮುಂದಾಗಿಲ್ಲ. ಅಗ್ನಿ ಅವಘಡದಂತ ದುರಂತಗಳು ಸಂಭವಿಸಿದಾಗ ಸಹಜವಾಗಿಯೇ ಜನ ಅಗ್ನಿಶಾಮಕ ದಳವನ್ನು ಸಂಪರ್ಕಿಸುತ್ತಾರೆ. ಆದರೆ ಅಗ್ನಿಶಾಮಕದಳ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ಅನಾಮಿಕ ವ್ಯಕ್ತಿಯೊಬ್ಬರ ಮೊಬೈಲ್ ನಂಬರ್ ನಮೂದಿಸಿರುವುದು ಎಷ್ಟು ಸರಿ ಎನ್ನುವುದು ಸಾಮಾಜಿಕ ಕಾರ್ಯಕರ್ತ ಬಸವರಾಜ ಎಂ.ರಾವೂರ ಅವರ ಪ್ರಶ್ನೆಯಾಗಿದೆ.
ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು, ವೆಬ್‍ಸೈಟ್ ನಿರ್ವಹಿಸುವುದು ಬೆಂಗಳೂರು ಮುಖ್ಯ ಕಚೇರಿ. ಅವರೇ ಈ ನಂಬರ್ ಬದಲಾಯಿಸಬೇಕು, ನಾವು ಈ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ ಎಂದು ಸಬೂಬು ಹೇಳಿ ಜಾರಿ ಕೊಳ್ಳುತ್ತಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ನಂಬರ್ ಬದಲಾಯಿಸಿ ಅಧಿಕೃತ ನಂಬರ್ ನಮೂದಿಸುವ ಕೆಲಸವನ್ನು ಅಗ್ನಿಶಾಮದಳ ಮಾಡಿಲ್ಲ. ಈಗಲಾದರೂ ಅದು ಎಚ್ಚೆತ್ತುಕೊಂಡು ವೆಬ್‍ಸೈಟ್‍ನಲ್ಲಿ ಅಧಿಕೃತ ಮೊಬೈಲ್ ನಂಬರ್ ನಮೂದಿಸಬೇಕು ಎಂಬುದು ಅವರ ಆಗ್ರಹವಾಗಿದೆ.
ಅಗ್ನಿಶಾಮಕದಳ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವೆಬ್‍ಸೈಟ್‍ನಲ್ಲಿರುವ ಅನಾಮಿಕ ವ್ಯಕ್ತಿಯ ಮೊಬೈಲ್ ನಂಬರ್ ತೆಗೆದು ಹಾಕಿ ಅಧಿಕೃತ ನಂಬರ್ ನಮೂದಿಸುವುದೇ ಎಂಬುವುದನ್ನು ಕಾದು ನೋಡಬೇಕಾಗಿದೆ.