ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಓಮಿಕ್ರಾನ್ ಪ್ರಯೋಗಾಲಯ

ಕಲಬುರಗಿ:ಡಿ.೦5: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಓಮಿಕ್ರಾನ್ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಅವರು ತಿಳಿಸಿದ್ದಾರೆ.
ಈಗಾಗಲೇ ಜಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೊರೋನಾ ವೈರಾಣು ಪತ್ತೆ ಪ್ರಯೋಗಾಲಯವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಓಮಿಕ್ರಾನ್ ಪತ್ತೆಗೆ ಬೇಕಾದ ತಂತ್ರಜ್ಞಾನ ಅಳವಡಿಸಲಾಗಿದೆ. ರೂಪಾಂತರಿ ವೈರಾಣು ಪತ್ತೆ ಮಾಡುವ ಪರೀಕ್ಷೆ ಇನ್ನೆರಡು ವಾರಗಳಲ್ಲಿ ಆರಂಭವಾಗಲಿದೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.
ಜಿನೊಮಾಫ್ ವೈರಾಣು ರೂಪಾಂತರಗೊಂಡು ಓಮಿಕ್ರಾನ್ ಆಗಿದೆ. ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಯ ಮೂಲಕ ಮಾತ್ರ ಅದನ್ನು ದೃಢಪಡಿಸಲು ಸಾಧ್ಯ. ಕಳೆದ ವಾರ ರಾಜ್ಯದ ಆರು ಕಡೆಗಳಲ್ಲಿ ಏಕಕಾಲಕ್ಕೆ ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್ ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅದರಲ್ಲಿ ಕಲಬುರ್ಗಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಮೊದಲ ಸ್ಥಾಪನೆ ಮಾಡಲಾಗಿದೆ. ಈಗಾಗಲೇ ಅದರ ತರಬೇತಿ ಪಡೆದ ಒಬ್ಬ ವಿಜ್ಞಾನಿ ಹಾಗೂ ಆರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಬೆಂಗಳೂರಿನ ನಿಮಾನ್ಸ್‍ನಲ್ಲಿ ಮಾತ್ರ ಜಿನೋಮ್ ಸಿಕ್ವೆನ್ಸಿಂಗ್ ಪ್ರಯೋಗಾಲಯ ಆರಂಭ ಮಾಡಿದೆ. ಪ್ರಕರಣಗಳು ಹೆಚ್ಚುತ್ತ ಸಾಗಿದರೆ ಕಲಬುರ್ಗಿಯಲ್ಲಿಯೇ ಎರಡನೇಯದಾಗಿ ಕಾರ್ಯಾರಂಭ ಮಾಡಲಿದೆ. ಅಲ್ಲಿಯರೆಗೆ ಒಮೈಕ್ರೋನ್ ಪತ್ತೆಗೆ ಮಾದರಿಯನ್ನು ಬೆಂಗಳೂರಿಗೇ ಕಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸದ್ಯ ಎರಡನೇ ಅಲೆಯಲ್ಲಿ ಕಾಣಿಸಿಕೊಂಡ ವೈರಾಣು ಈಗಲೂ ಪತ್ತೆಯಾಗುತ್ತಿದೆ. ಅದರಲ್ಲಿಯೂ ಲಕ್ಷಣಗಳು ಇಲ್ಲದವರೇ ಹೆಚ್ಚು. ಇದುವರೆಗೂ ರೂಪಾಂತರಿಗಳಾದ ಡೆಲ್ಟಾ ಅಥವಾ ಓಮೈಕ್ರಾನ್ ಸೋಂಕಿನ ಲಕ್ಷಣಗಳು ಯಾರಲ್ಲಿಯೂ ಪತ್ತೆಯಾಗಿಲ್ಲ. ಒಂದು ವೇಳೆ ರೂಪಾಂತರಿ ಕಾಣಿಸಿಕೊಂಡರೆ ಜನ ಭಯಪಡಬೇಕಾಗಿಲ್ಲ. ಅದಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನೂ ಜಿಮ್ಸ್‍ನಲ್ಲಿ ಮಾಡಿಕೊಳ್ಳಲಾಗಿದೆ. ಹಾಸಿಗೆ, ಆಮ್ಲಜನಕ, ವೈದ್ಯರು, ಐಸೋಲೇಷನ್ ವಾರ್ಡ್‍ಗಳಿಗೂ ಸಮಸ್ಯೆ ಇಲ್ಲ. ಆದಾಗ್ಯೂ, ಈ ವೈರಾಣು ಅಷ್ಟು ಗಂಭೀರವಾಗಿ ಕಾಣಿಸಿಕೊಳ್ಳುವ ಸೂಚನೆಗಳು ಇನ್ನೂ ಪತ್ತೆಯಾಗಿಲ್ಲ. ರಾಜ್ಯ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಸದ್ಯಕ್ಕೆ ಪಾಲಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ
ಜಿಲ್ಲೆಯಲ್ಲಿ ಐದು ಕಡೆಗಳಲ್ಲಿ ಕೊರೋನಾ ವೈರಾಣು ಪತ್ತೆ ಪ್ರಯೋಗಾಲಯಗಳಿವೆ. ಜಿಮ್ಸ್‍ನ ಪ್ರಯೋಗಾಲಯದಲ್ಲಿಯೇ ದಿನಕ್ಕೆ 6000 ಮಾದರಿಗಳನ್ನು ತಪಾಸಣೆ ಮಾಡಬಹುದು. ಆದಾಗ್ಯೂ, ಕೋವಿಡ್ ಲಕ್ಷಣಗಳು ಕಂಡುಬರುವುದು ಕಡಿಮೆಯಾಗಿದ್ದು, ದಿನಕ್ಕೆ 2000 ಮಾದರಿಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅದರಲ್ಲ ಕಳೆದ ಎರಡು ವಾರಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಸೋಂಕಿತ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ ಎಂದು ಅವರು ಪ್ರಯೋಗಾಲಯದ ಮಾಹಿತಿಯನ್ನು ಒದಗಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಅವರು ಈ ಕುರಿತು ಮಾಹಿತಿ ನೀಡಿ, ಓಮಿಕ್ರಾನ್ ಜಿಲ್ಲೆಗೆ ಪ್ರವೇಶಿಸದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯು ಈಗಾಗಲೇ ನಿರ್ದೇಶನ ನೀಡಿದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಇರಬಹುದೇ ಎಂದು ಪರಿಶೀಲಿಸಲಾಗುತ್ತಿದೆ. ಪ್ರತಿ ದಿನ ಲ್ಯಾಬ್ ಟೆಸ್ಟಿಂಗ್ ಪರೀಕ್ಷೆಗಳನ್ನು ಹೆಚ್ಚಿಸಲಾಗುತ್ತಿದೆ. ಜನರು ಈಗಲೇ ಎಚ್ಚೆತ್ತುಕೊಳ್ಳಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಅಫಜಲಪುರ ಹಾಗೂ ಆಳಂದ್ ತಾಲ್ಲೂಕಿನ ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ಚೆಕ್‍ಪೋಸ್ಟ್‍ಗಳಲ್ಲಿಯೂ ಸಹ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಿ ತಪಾಸಣೆ ತೀವ್ರಗೊಳಿಸಲಾಗಿದೆ. ಬೇರೆ ರಾಜ್ಯಗಳಿಂದ ಬರುವವರು ಆರ್‍ಟಿಪಿಸಿಆರ್ ವರದಿ ನೀಡಬೇಕು ಇಲ್ಲವೇ ಎರಡು ಲಸಿಕೆಗಳನ್ನು ಹಾಕಿಸಿಕೊಂಡ ಪ್ರಮಾಣಪತ್ರವನ್ನು ತೋರಿಸಬೇಕು. ಒಂದು ವೇಳೆ ಜ್ವರ ಅಥವಾ ಇತರೆ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅವರೆರಡೂ ಪ್ರಮಾಣಪತ್ರ ಇದ್ದರೂ ಸಹ ಜಿಲ್ಲೆಗೆ ಪ್ರವೇಶ ನೀಡುವುದಿಲ್ಲ. ಸ್ಥಳದಿಂದಲೇ ಅವರಿಗೆ ಹೆಚ್ಚಿನ ತಪಾಸಣೆಗೆ ಕಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.