ಕಲಬುರಗಿಯ “ಅಮ್ಮ” ಸರಸ್ವತಿ ತಂತ್ರಿ

ಕಲಬುರಗಿ:ಜ.15:ಕಲಬುರಗಿಯಲ್ಲಿ ಎಲ್ಲರಿಗೂ ‘ಅಮ್ಮ’ ಎಂದೇ ಖ್ಯಾತರಾದ ಅಧ್ಯಾತ್ಮಜೀವಿ, ಸಮಾಜ ಸೇವಕಿ, ಆಕಾಶವಾಣಿ ಸಂಗೀತ ಕಲಾವಿದೆ ಉಡುಪಿ ಮೂಲದ ಶ್ರೀಮತಿ ಸರಸ್ವತಿ ತಂತ್ರಿಯವರು ಎಂಟುವರೆ ದಶಕಗಳ ಸಾರ್ಥಕ ಜೀವನ ನಡೆಸಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಉಡುಪಿಯ ಪಾದೂರು ರಾಮಕೃಷ್ಣ ತಂತ್ರಿಯವರ ಕೈಹಿಡಿದು ಕಲಬುರಗಿಗೆ ಬಂದು ಅಧ್ಯಾತ್ಮ ಕ್ಷೇತ್ರಕ್ಕೆ ಅನುಪಮ ಕೊಡುಗೆ ಸಲ್ಲಿಸಿದ ಸಾಧಕರು. 1982 ರಲ್ಲಿ ಪಾದೂರು ರಾಮಕೃಷ್ಣ ತಂತ್ರಿಯವರು ಅಪಘಾತವೊಂದರಲ್ಲಿ ಅಸುನೀಗಿದ ನಂತರ ದೊಡ್ಡ ಹೊಣೆಯನ್ನು ಹೊತ್ತು ಚುಕ್ಕಾಣಿ ಹಿಡಿದರು. ಸಾತ್ವಿಕ ಜೀವನ, ಸಂಗೀತ, ದಾಸ ಸಾಹಿತ್ಯ, ಸಮಾಜ ಸೇವೆಯಲ್ಲಿ ನಿರತರಾಗಿ ತಮ್ಮ ಬದುಕು ಸಾಗಿಸಿದ ಅವರು ವಯೋಸಹಜ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿ ಜ. 14 ರಂದು ಮಕರ ಸಂಕ್ರಾಂತಿ ದಿನ ಹರಿಪಾದ ಸೇರಿ ‘ತಂತ್ರಿ ಯುಗಾಂತ್ಯ’ಗೊಂಡಿತು.
ಅಷ್ಟಮಠಗಳ ಸೇವಕಿ :
ರಾಮಕೃಷ್ಣ ತಂತ್ರಿಯವರು ಉದ್ಯೋಗ ಅರಸಿಕೊಂಡು ಉಡುಪಿಯ ಪಾದನೂರಿನಿಂದ ಶರಣರ ನಾಡು ಕಲಬುರಗಿಗೆ ಬಂದವರು. 1960 ರಲ್ಲಿ ಕಿರು ಪ್ರಮಾಣದಲ್ಲಿ ಮೋಹನ್‍ಲಾಡ್ಜ್ ಹಾಗೂ ಮೋಹನ್ ಕಾಟೇಜ್ ಪ್ರಾರಂಭಿಸಿ ಸ್ವಂತ ಉದ್ಯಮ ಆರಂಭಿಸಿದ್ದರು. ಉಡುಪಿ ಮೂಲದವರಾಗಿ ದಾಸ ಸಾಹಿತ್ಯ, ಉಡುಪಿಯ ಅಷ್ಟಯತಿಗಳ ಕೃಪಾಕಟಾಕ್ಷದಿಂದ ಕಲಬುರಗಿಗೂ ಉಡುಪಿಗೂ ನಂಟು ಬೆಳೆಸುವಂತೆ ಮಾಡಿದ್ದರು. ತಂತ್ರಿಯವರ ಅಗಲುವಿಯ ನಂತರ ಸರಸ್ವತಿಯವರು ತನ್ನ ಗಂಡನ ಎಲ್ಲ ಕನಸು ಸಾಕಾರಕ್ಕೆ ಟೊಂಕಕಟ್ಟಿ ನಿಂತರು. ಹರಿವಾಯು ಗುರುಗಳ ಕೃಪಾಶೀರ್ವಾದ ಮತ್ತು ಕಲಬುರಗಿ ಜನತೆಯ ಮಹಾಬೆಂಬಲದಿಂದ ತಂತ್ರಿ ಮನೆತನದ ಕನಸು ನನಸಾಗಲು ಸಾಧ್ಯವಾಯಿತು.
ಕಲಬುರಗಿಯ ಮಾನಬಿಂದುಗಳಲ್ಲಿ ಒಂದು ಎಂಬುದಾಗಿ ಗುರುತಿಸಲ್ಪಡುವ ಜೇವರ್ಗಿ ರಸ್ತೆಯಲ್ಲಿರುವ ಶ್ರೀರಾಮ ಮಂದಿರ ಇಂದು ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಮಂದಿರದ ಆರಾಧ್ಯ ಮೂರ್ತಿಗಳಾದ ಶ್ರೀರಾಮ, ಸೀತಾದೇವಿ, ಲಕ್ಷ್ಮಣ, ಆಂಜನೇಯ ವಿಗ್ರಹಗಳು ಭಕ್ತರ ಅಭೀಷ್ಟೆ ಈಡೇರಿಸುವ ಶಕ್ತಿ ದೇವತೆಗಳು. ಮಂದಿರವು ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಪೇಜಾವರ ಮಠದ ಅಂದಿನ ಪೂಜ್ಯ ಶ್ರೀ ವಿಶ್ವೇಶತಿರ್ಥ ಸ್ವಾಮೀಜಿಯವರ ಹಾಗೂ ಅಂದಿನ ಸುಬ್ರಹ್ಮಣ್ಯ ಮಠಾಧೀಶರ ಸಮ್ಮುಖದಲ್ಲಿ ಪ್ರತಿಷ್ಠಾಪನಾ ಕಾರ್ಯ ಭಕ್ತಿ ಸಡಗರದಿಂದ ನೆರವೇರಿತ್ತು. ಮಂದಿರದ ‘ಶ್ರೀರಾಮೋತ್ಸವ’, ದಾಸ ಪ್ರವಚನ, ಜ್ಞಾನ ಪ್ರಸಾರದ ಸತ್ಸಂಗ, ಸಂಗೀತ ಸಮಾರೋಹ, ಸಾಂಸ್ಕøತಿಕ ವೈಭವಗಳು ಕಲಬುರಗಿಯ ಸಾಂಸ್ಕøತಿಕ, ಅಧ್ಯಾತ್ಮಿಕ ಲೋಕಕ್ಕೆ ಹೊಸ ಸ್ಪರ್ಶ ನೀಡಿದ್ದನ್ನು ಅಲ್ಲಗೆಳೆಯಲಾಗದು.
ಫಲಿಮಾರು ಮಠಾಧೀಶರು, ಅದಮಾರು ಯತಿವರೇಣ್ಯರು, ಬನ್ನಂಜೆ ಗೋವಿಂದಾಚಾರ್ಯರು, ಅರಳು ಮಲ್ಲಿಗೆ ಪಾರ್ಥಸಾರಥಿ ಮುಂತಾದವರ ಪ್ರವಚನ ಕಾರ್ಯಕ್ರಮಗಳು ಭಾಗವತ, ಪುರಾಣಗಳ ಜ್ಞಾನ ಪ್ರಸಾರಕ್ಕೆ ಕಾರಣವಾಯಿತು. ಅಧ್ಯಾತ್ಮ ಬಂಧುಗಳಿಗೆ ಶ್ರೀರಾಮ ಮಂದಿರ ಸತ್ಸಂಗದ ತಾಣವಾಯಿತು. ಸರಸ್ವತಿ ತಂತ್ರಿಯವರು ಸಂಗೀತದ ಮನೆತನದಿಂದ ಬಂದವರಾಗಿದ್ದು ಕಲಬುರಗಿ ಆಕಾಶವಾಣಿ ನಿಲಯದ ಸಂಗೀತ ಕಲಾವಿದರೂ, ಸಂಗೀತ ಕಲಾವಿದರ ಆಯ್ಕೆ ಸಮಿತಿಯ ಮಾಜಿ ಸದಸ್ಯರೂ ಕೂಡಾ ಆಗಿದ್ದರು. ಇವರ ಕಂಠದಲ್ಲಿ ದಾಸ ಸಂಕೀರ್ತನೆ ಮೂಡಿ ಬಂದರೆ ಎಲ್ಲರೂ ಎವೆಯಿಕ್ಕದೆ ಕೇಳುವಂತಾಯಿತು. ಶ್ರೀರಾಮ ಮಂದಿರದಲ್ಲಿ ಅವರು ಕಲಬುರಗಿಯ ಮಹಿಳಾ ಭಜನಾ ತಂಡ ಕಟ್ಟಿ ದಾಸ ಸಂಕೀರ್ತನೆ ಪ್ರಸಾರಕ್ಕೆ ಹೊಸ ನಾಂದಿ ಹಾಡಿದರು.
ಸಮಾಜ ರತ್ನ :
ಕಲಬುರಗಿಯಲ್ಲಿ ದೇಗುಲಗಳ ನಿರ್ಮಾಣಕ್ಕೆ ನೆರವಿನ ಹಸ್ತ ಚಾಚಿದವರು. ರಾಮಮಂದಿರದ ನಿರ್ಮಾಣ ನಂತರ ಬ್ರಹ್ಮಪುರದ ಶ್ರೀರಾಘವೇಂದ್ರ ಗುಡಿ, ಕಲಬುರಗಿಯ ಕೃಷ್ಣ ಗುಡಿ ಅಭಿವೃದ್ಧಿಗೆ ಉದಾರ ಕೊಡುಗೆ ನೀಡಿ ಸಹಕರಿಸಿದವರು. ಕೃಷ್ಣಗುಡಿಯ ಆಡಳಿತ ಸಮಿತಿ ಪದಾಧಿಕಾರಿಯಾಗಿ ಮುನ್ನಡೆಸುತ್ತಿದ್ದಾರೆ. ಪಾದೂರು ರಾಮಕೃಷ್ಣ ತಂತ್ರಿಯವರ ಹೆಸರನ್ನು ಚಿರಸ್ಥಾಯಿಯಾಗಿಸಲು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ದಾಸಸಾಹಿತ್ಯ ಪ್ರಸಾರಕ್ಕಾಗಿ ದತ್ತಿ ನಿಧಿ ಸ್ಥಾಪನೆ ಮಾಡಿದ ಹೆಗ್ಗಳಿಕೆ ಸರಸ್ವತಿ ತಂತ್ರಿಯವರಿಗೆ ಸಲ್ಲುತ್ತದೆ. ಕಲಬುರಗಿಯ “ನಂದ ಗೋಕುಲ” ಪರಿತ್ಯಕ್ತ ಮಕ್ಕಳ ಪಾಲನಾ ಕೇಂದ್ರಕ್ಕೆ ದಿ.ವೆಂಕಟೇಶ ಗುರುನಾಯಕರ ಸಮ್ಮುಖದಲ್ಲಿ ಉದಾರ ದೇಣಿಗೆ ನೀಡಿ ಮಾನವೀಯ ಸೇವೆ ಮೆರೆದವರು. ಕಲಬುರಗಿ ಜಿಲ್ಲಾ ಬ್ರಾಹ್ಮಣ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕೈಲಾದ ಸೇವೆ ಮಾಡಿ ಪುನೀತರಾದವರು.
ದಕ್ಷಿಣ ಕನ್ನಡ ಸಂಘವನ್ನು ಸ್ಥಾಪನೆ ಮಾಡಿದವರಲ್ಲೊಬ್ಬರು ಪಾದೂರು ರಾಮಕೃಷ್ಣ ತಂತ್ರಿಯವರು. ಆ ಕಾರಣಕ್ಕಾಗಿ ಸಂಘದ ಸಮಾಜ ಸೇವೆಗೆ ತಂತ್ರಿಯವರ ಕೊಡುಗೆ ಅಪಾರ. ಯಕ್ಷಗಾನ ಪ್ರದರ್ಶನವನ್ನು ರಾಮಮಂದಿರದಲ್ಲಿ ಆಯೋಜಿಸಿ ಕರಾವಳಿಯ ಸಾಂಸ್ಕøತಿಕ ಸಿರಿಸೊಬಗನ್ನು ತೊಗರಿಯ ನಾಡಿನಲ್ಲಿ ಬಿತ್ತಿದರು. ಸಂಘದ ‘ಅನ್ನಬ್ರಹ್ಮ ಯೋಜನೆ’ಗೆ ತನ್ನ ಮಾನಸ ಪುತ್ರ ಶ್ರೀನಿವಾಸ ಆಚಾರ್ಯರನ್ನು ನೇಮಿಸುವಂತೆ ಮಾಡಿ ಉಡುಪಿ ಅಷ್ಠಮಠದ ಅನ್ನದಾಸೋಹ ಪರಂಪರೆಯನ್ನು ಮುಂದುವರಿಸಲು ಪ್ರೇರಣೆ ನೀಡಿದವರು. ದಾಸ ಸಾಹಿತ್ಯದ ಸರಸ್ವತಿಯಾಗಿ ಗಾನ, ಸಂಕೀರ್ತನೆ, ಭಜನೆ, ಪ್ರವಚನ ನಡೆಸಿ ನಿತ್ಯೋತ್ಸವ ಮಾಡಿದವರು. ರಾಮ ಮಂದಿರದ ಭಾನುವಾರದ ಪಲ್ಲಕ್ಕಿ ಉತ್ಸವ, ರಂಗಪೂಜೆ, ವೈಭವೋಪೇತವಾದುದು. ಶ್ರೀರಾಮ ಗುಡಿಯ ಅಲಂಕಾರವೇ ಒಂದು ವಿಶಿಷ್ಟ. ಬಿಸಿಲೂರಿನಲ್ಲಿ ಉಡುಪಿಯ ಅಧ್ಯಾತ್ಮ ಪರಿಸರ ಕಟ್ಟಿ ಧರ್ಮ ಸೇತು ಬೆಸೆದವರು. ಈ ಸಮಾಜದಲ್ಲಿ ಅಮೂಲ್ಯ ರತ್ನವಾಗಿ ಬೆಳೆದವರು.
ಗಾನ ಸರಸ್ವತಿ :
ಕಲಬುರಗಿ ಆಕಾಶವಾಣಿಯಲ್ಲಿ ಇವರು ಹಾಡಿದ ಹಾಡುಗಳು ಕರ್ಣಾನಂದ ನೀಡುತ್ತಿತ್ತು. ಕರ್ನಾಟಕ ಸಂಗೀತ ಶೈಲಿ ಆಲಿಸಬೇಕಾದರೆ ಸರಸ್ವತಿ ತಂತ್ರಿಯವರ ಕಂಠಗಾನ ಸವಿಯಬೇಕು. ದಾಸ ಸಂಕೀರ್ತನೆಗಳ ಮೂಲಕ ಮನೆ ಮಾತಾದವರು. ಕಲಬುರಗಿ ಆಕಾಶವಾಣಿಯಲ್ಲಿ ಅನೇಕ ಸುಗಮ ಸಂಗೀತ ಕಲಾವಿದರನ್ನು ಗುರುತಿಸಿ ಆಯ್ಕೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಕೊನೆಗಾಲದ ವರೆಗೂ ಆಕಾಶವಾಣಿಯ ಶ್ರೋತೃವಾಗಿದ್ದುಕೊಂಡು ವಂದನ, ಸುಗಮ ಸಂಗೀತ, ರವಿವಾರದ ಸಂಗೀತ ಸಭಾ, ಆಲಿಸಿ ಸಂತೋಷಪಟ್ಟವರು. ಜಿ.ಕೆ. ಕುಲಕರ್ಣಿ, ಜಿ.ಎಂಶಿರಹಟ್ಟಿ, ಸುಭಾಷ್ ಬೆಟಗೇರಿ, ಪ್ರಹ್ಲಾದ ದೇಶಪಾಂಡೆ ಮುಂತಾದ ಆಕಾಶವಾಣಿ ಅಧಿಕಾರಿಗಳ ಜೊತೆ ನಿಕಟ ಸಂಬಂಧ ಇಟ್ಟುಕೊಂಡವರು. ಗುಲ್ಬರ್ಗಾ ವಿ. ವಿ.ಯ ಕುಲಪತಿಗಳಾಗಿದ್ದ ಹಾ. ಮಾ. ನಾಯಕ, ತಂತ್ರಿಯವರ ಸಾಹಿತ್ಯಿಕ, ಸಾಂಸ್ಕøತಿಕ ಸಂಗೀತದ ಆಸಕ್ತಿಗೆ ಮಾರುಹೋಗಿದ್ದಾರೆ. ತಂತ್ರಿಯವರ ಸೇವಾ ಮನೋಭಾವಕ್ಕೆ ಅಷ್ಟಮಠಗಳ ಯತಿವರ್ಯರು ಬೆಂಬಲ ನೀಡುತ್ತಿದ್ದರು. ಉಡುಪಿ ಪರ್ಯಾಯದಲ್ಲಿ ತಂತ್ರಿಯವರ ಸೇವಾ ಕಾರ್ಯ ನಿರಂತರವಾಗಿತ್ತು. ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಅನ್ನ ವಸತಿ ಹಣಕಾಸಿನ ನೆರವು ನೀಡಿ ದೊಡ್ಡ ಉದ್ಯೋಗ ಮತ್ತು ವಿದೇಶದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿದ್ದಾರೆ. ಇವರ ಸಮಾಜಮುಖಿ ಚಿಂತನೆಗೆ ಪ್ರೋತ್ಸಾಹ ನೀಡಿದ ಜಿಲ್ಲಾಧಿಕಾರಿಗಳಲ್ಲಿ ಕೆ.ಸತ್ಯಮೂರ್ತಿ ಪ್ರಮುಖರು.
ಸಬಲೀಕರಣಕ್ಕೆ ಸಾಕ್ಷಿ ಮಹಾಮಾತೆ :
ಮಹಿಳಾ ಸಬಲೀಕರಣಕ್ಕೆ ಸ್ಪಷ್ಟ ಉದಾಹರಣೆ ಸರಸ್ವತಿ ತಂತ್ರಿಯವರದು. ಹೆಣ್ಣು ಮಗಳೊಬ್ಬಳು ಪರಿಸ್ಥಿತಿಗೆ ಮತ್ತು ಸವಾಲುಗಳಿಗೆ ಅಂಜದೆ ಛಲದಂಕ ಮಲ್ಲೆಯಂತೆ ದುಡಿದು ಸಾಧನೆ ಮಾಡಿ ತೋರಿದ್ದು ಆದರ್ಶ. ಪತಿಯನ್ನು ಕಳೆದುಕೊಂಡಾಗ ಧೈರ್ಯ ಕಳೆದುಕೊಳ್ಳದೆ ಏಕಾಂಗಿಯಾಗಿ ನಿಂತು ಅವರ ಕನಸುಗಳನ್ನು ಸಾಕಾರಗೊಳಿಸಿದ ದಿಟ್ಟ ಮಹಿಳೆ. ಅವರ ಧೈರ್ಯ, ಇಚ್ಛಾಶಕ್ತಿ, ಸಹನಶೀಲತೆ, ತಾಳ್ಮೆ ಮಾದರಿಯಾದದ್ದು. ರಾಮಮಂದಿರವನ್ನು ನಿರ್ಮಾಣ ಮಾಡಿ ತೋರಿಸಿದ ಸಾಧಕಿ. ಇವರಿಗೆ ಸಾಥ್ ನೀಡಿದವರು ತಮ್ಮ ಸಮೀಪ ಬಂಧು ಶ್ರೀನಿವಾಸ ಆಚಾರ್ಯ. ಮಕ್ಕಳಭಾಗ್ಯ ವಂಚಿತರಾದರೂ ಕಲಬುರಗಿಯ ಜನಕೆ ತಮ್ಮ ಮಕ್ಕಳೆಂದು ಪ್ರೀತ್ಯಾದರ ತೋರಿ ಎಲ್ಲರ ಪಾಲಿಗೆ “ಅಮ್ಮ” ಆದವರು. ದೀನ ದಲಿತರ, ಮಹಿಳೆಯರ ಪಾಲಿಗೆ ಮಹಾಮಾತೆಯಾಗಿ ತುತ್ತು ಅನ್ನ ನೀಡಿ ಕಳುಹಿಸುವ ತಂತ್ರಿಯವರ ಮನೆ ದಾಸೋಹದ ಮನೆಯಾಗಿತ್ತು. ತಂತ್ರಿ ಮನೆಯಲ್ಲಿ ವಿಶೇಷ ಅಂದರೆ “ಕಾಫಿ”. ಅವರ ಕೈಯಿಂದ ಪಿಲ್ಟರ್ ಕಾಫಿಕುಡುಯುವುದೆಂದರೆ ಅದೊಂದು ಭಾಗ್ಯ ಮತ್ತು ರುಚಿ ಸವಿದವರಿಗೆ ಗೊತ್ತು. ಅಮ್ಮನ ಕಾಫಿಗಾಗಿ ಗಣ್ಯರುಕಾಯುತ್ತಿದ್ದರು. ಊಟವಿಲ್ಲದಿದ್ದರೂ ಕೇವಲ “ಕಾಫಿ” ಸಾಕು ಎನ್ನುತ್ತಿದ್ದರು. ಅಂತಹ ಕೈಗುಣ.
ಗುಣ ಸಂಪನ್ನೆ :
ಸರಸ್ವತಿ ತಂತ್ರಿಯವರಿಗೆ ಊರೆಲ್ಲಾ ಮನೆ, ಜನರೆಲ್ಲ ಗೆಳೆಯರು, ಎಲ್ಲರನ್ನು ಮೈತಟ್ಟಿ ಮಾತಾಡಿಸಿ ತಲೆ ಸವರಿ ಆಶೀರ್ವದಿಸುವ ದೊಡ್ಡ ಗುಣ. ಬಂದವರು ಊಟ, ಕಾಫಿ ಇಲ್ಲದೆ ಹೋಗುವಂತಿಲ್ಲ. ದಕ್ಷಿಣೆ ನೀಡಿ ಖುಷಿಪಡಿಸುವವರು. ಜನರೊಳಗೊಂದಾಗಿ ಕೃತಾರ್ಥ ಜೀವನ ನಡೆಸಿದವರು. ‘ಮಾನವ ಜನ್ಮ ದೊಡ್ಡದು’ ಎಂಬ ದಾಸರ ನುಡಿಯಂತೆ ಬಾಳಿದ ಗುಣಸಂಪನ್ನೆ. ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಯ ತುತ್ತ ತುದಿಗೇರಿ “ಸತ್ತ ಮೇಲೂ ಬದುಕು” ಸಾಧ್ಯವಾಗಿಸಿದ ಕರಾವಳಿಯ ಈ ಹೆಣ್ಣು ಮಗಳ ಸಾಧನೆ ಸೈ ಎನಿಸುವಂಥದ್ದು. ಅಗಲುವಿಕೆಯಿಂದಾಗಿ ‘ಅಮ್ಮ’ನ ಪ್ರೀತಿ ವಂಚಿತ ಕಲಬುರಗಿಯ ಜನತೆಗೆ ಅವರು ಹಾಕಿಕೊಟ್ಟ ಆದರ್ಶ ಕೈದೀವಿಗೆಯಾಗಲಿ.

          ಡಾ. ಸದಾನಂದ ಪೆರ್ಲ 
                  ಕಾರ್ಯಕ್ರಮ ನಿರ್ವಾಹಕÀರು
           ಆಕಾಶವಾಣಿ ಕಲಬುರಗಿ