ಕಲಬುರಗಿ,ಯಾದಗಿರಿ ಜಿಲ್ಲೆಯಲ್ಲಿದೆ 69 ಸಾವಿರ ಎಕರೆ ಗೋಮಾಳ ಜಮೀನು

ಕಲಬುರಗಿ ಏ 8: ಕಲಬುರಗಿ ಮತ್ತು ಯಾದಗಿರಿ ಒಟ್ಟು 69713.33 ಎಕರೆ ಗೋಮಾಳ ಜಮೀನು ಲಭ್ಯವಿದೆ. ಕಲಬುರಗಿ ಜಿಲ್ಲೆಯಲ್ಲಿ 57240.21 ಎಕರೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 12473.12 ಎಕರೆ ಗೋಮಾಳ ಜಮೀನು ಇದೆ ಎಂದು ಕಂದಾಯ ಸಚಿವ ಆರ್ ಅಶೋಕ ಅವರು ತಿಳಿಸಿದರು. ವಿಧಾನ ಪರಿಷತ್ತು ಸದಸ್ಯ ಬಿ.ಜಿ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನಲ್ಲಿ ಜಿಲ್ಲೆಯ ಅತಿ ಹೆಚ್ಚು ( 11317.23 ಎಕರೆ ) ಗೋಮಾಳ ಭೂಮಿ ಇದೆ.ಗೋಮಾಳ ಸೇರಿದಂತೆ ಸರಕಾರಿ ಜಮೀನು ಒತ್ತುವರಿಯಾಗದಂತೆ ರಕ್ಷಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಅಕ್ರಮ ಒತ್ತುವರಿದಾರರ ವಿರುದ್ಧ ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.ಯಾದಗಿರಿ ಜಿಲ್ಲೆಯಲ್ಲಿ ಒತ್ತುವರಿಯಾದ 385.11 ಎಕರೆ ಪೈಕಿ 105.11 ಎಕರೆ ಭೂಮಿ ತೆರವುಗೊಳಿಸಲಾಗಿದ್ದು,ಬಾಕಿ ಉಳಿದ 280 ಎಕರೆಗೆ ಸಂಬಂಧಿಸಿದಂತೆ ಒಟ್ಟು 169 ಪ್ರಕರಣ ದಾಖಲಿಸಲಾಗಿದೆ.
ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿ ಹಂಚಿಕೆ ಮಾಡಲಾಗಿದೆ. ಸರಕಾರಿ ಶಾಲೆ, ಹಾಸ್ಟೇಲ್, ಘನ ತ್ಯಾಜ್ಯ ವಿಲೇವಾರಿ ಘಟಕ,ಸರಕಾರಿ ಕಚೇರಿ ,ಸಾರ್ವಜನಿಕ ಸ್ಮಶಾನ ಮೊದಲಾದ ಉದ್ದೇಶಗಳಿಗೆ ಭೂಮಿ ನೀಡಲಾಗಿದೆ.ಕರ್ನಾಟಕ ಭೂ ಕಂದಾಯ ಕಾಯ್ದೆ 1964 ( ಕಲಂ 71) ಹಾಗೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರ ಅನ್ವಯ ಭೂ ಮಂಜೂರಾತಿ ಮಾಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.