ಕಲಬುರಗಿಯಲ್ಲಿ 3 ಕಡೆ ಡ್ರೈ ರನ್ ಗೆ ಚಾಲನೆ

ಕಲಬುರಗಿ,ಜ.1-ಕೊರೊನಾ ಸೋಂಕು ನಿಯಂತ್ರಣಕ್ಕೆ ಲಸಿಕೆ ಶೀಘ್ರದಲ್ಲಿ ಬರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಕಡೆ ಇಂದು ಕೋವಿಡ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗೆ (ಡ್ರೈ ರನ್) ಇಂದು ಚಾಲನೆ ನೀಡಲಾಗಿದೆ.
ನಗರದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಲಬುರಗಿ ಗ್ರಾಮೀಣ ಭಾಗದ ಅವರಾದ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜೇವರ್ಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದು ಲಸಿಕೆಯ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಲಾಯಿತು.
ಪ್ರತಿಯೊಂದು ಕೇಂದ್ರದಲ್ಲಿ ತಲಾ 25 ಜನ ಆರೋಗ್ಯ ಸಿಬ್ಬಂದಿಗೆ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಇದಕ್ಕಾಗಿ ಪ್ರತಿಯೊಂದು ಕೇಂದ್ರದಲ್ಲಿ ಐವರು ಸಿಬ್ಬಂದಿ ಮತ್ತು ಓರ್ವ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಕೋವಿಡ್ ಲಸಿಕೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿರುವ ನಗರದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಮೂರು ಕಡೆ ಡ್ರೈ ರನ್ ಮಾಡಲಾಗುತ್ತಿದೆ. ಪ್ರತಿ ಕೇಂದ್ರದಲ್ಲಿ 25 ಜನರಿಗೆ ಲಸಿಕೆ ನೀಡುವ ಅಣಕು ಮಾಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿಯೂ ಮೂರು ಸೆಕ್ಷನ್ ಗಳನ್ನು ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ವೇಯ್ಟಿಂಗ್ ರೂಮ್ ವ್ಯವಸ್ಥೆ ಮಾಡಲಾಗಿರುತ್ತದೆ. ಬಂದ ತಕ್ಷಣ ಅವರನ್ನು ವೇಯ್ಟಿಂಗ್ ರೂಮಿನಲ್ಲಿ ಕೂರಿಸಲಾಗುತ್ತದೆ. ಅವರ ಹೆಸರು, ಮಾಹಿತಿ ಪಡೆಯಲಾಗುತ್ತದೆ. ಅವರ ಐಡಿ ಪ್ರೂಫ್ ಚೆಕ್ ಮಾಡಿ, ಟ್ಯಾಲಿ ಮಾಡಿಕೊಳ್ಳಲಾಗುತ್ತದೆ. ಎಲ್ಲವೂ ತಾಳೆಯಾದ ನಂತರ ವ್ಯಾಕ್ಸಿನ್ ರೂಮ್ ಗೆ ಕರೆದೊಯ್ದು ಇಂಜೆಕ್ಷನ್ ನೀಡಲಾಗುತ್ತದೆ. ಅದಾದ ನಂತರ ಅಬ್ಸರ್ ವೇಷನ್ ರೂಮಿನಲ್ಲಿ ಅರ್ಧ ಗಂಟೆ ಕೂರಿಸಲಾಗುತ್ತದೆ. ವ್ಯಾಕ್ಸಿನ್ ರಿಯಾಕ್ಷನ್ ಏನಾದ್ರೂ ಆಗಿದ್ದರೆ ಅರ್ಧ ಗಂಟೆಯಲ್ಲಿ ಗೊತ್ತಾಗಲಿದೆ ಎಂದು ಹಾಗೆ ಮಾಡಲಾಗುತ್ತಿದೆ. ಪ್ರತಿ ಕೇಂದ್ರದಲ್ಲಿ ಇದಕ್ಕಾಗಿ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದರ ಮೇಲೆ ನಿಗಾ ಇಡಲು ಓರ್ವ ನೋಡಲ್ ಅಧಿಕಾರಿಯನ್ನೂ ನೇಮಿಸಲಾಗುತ್ತಿದೆ ಎಂದು ಹೇಳಿದರು.
ಸಿಬ್ಬಂದಿ ಕಾರ್ಯಚಟುವಟಿಕೆಗಳ ಕುರಿತು ನೋಡಲ್ ಅಧಿಕಾರಿ ಮಾಹಿತಿ ನೀಡಲಿದ್ದಾರೆ. ವ್ಯಾಕ್ಸಿನ್ ನೀಡುವ ಸಂದರ್ಭದಲ್ಲಿ ಏನಾದರೂ ಕೊರತೆಗಳಾಗಲಿವೆಯೇ ಅಥವಾ ಏನಾದರೂ ತೊಂದರೆಗಳಾಗಲಿವೆಯೇ ಎನ್ನೋದನ್ನು ತಿಳಿದುಕೊಳ್ಳಲು ಹೀಗೆ ಮಾಡಲಾಗುತ್ತಿದೆ. ಏನಾದರೂ ಲೋಪಗಳಾದಲ್ಲಿ ಅದನ್ನು ಹೇಗೆ ಸರಿಮಾಡಿಕೊಳ್ಳಲು ಮುಂದೆ ಕ್ರಮ ಕೈಗೊಳ್ಳಲಾಗುತ್ತದೆ. ನಾಳೆ ಡ್ರೈ ರನ್ ಬಗ್ಗೆ ಸಂಜೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಕೋವಿಡ್ ಲಸಿಕೆ ಬಂದ ನಂತರ ಪ್ರಥಮವಾಗಿ 15,900 ಆರೋಗ್ಯ ಇಲಾಖೆಯ ಕೋವಿಡ್ ವರ್ಕಸ್ ಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೆ ಕೋವಿಡ್ ಯ್ಯಾಪ್ ನಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ಎರಡನೇ ಹಂತದಲ್ಲಿ ಮುಖ್ಯವಾಹನಿ ಕೆಲಸದಲ್ಲಿರುವ (ಫ್ರಂಟ್ ಲೈನ್ ವರ್ಕರ್ಸ್) ಪೊಲೀಸರು, ಸಫಾಯಿ ಕರ್ಮಚಾರಿಗಳು ಸೇರಿದಂತೆ ಮತ್ತಿತರರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 1.20 ಲಕ್ಷ ಲಸಿಕೆ ಸ್ಟಾಕ್ ಮಾಡಲು ರೆಫ್ರಿಜಿರೇಟರ್ ಸಿದ್ಧವಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ತಿಳಿಸಿದರು.