ಕಲಬುರಗಿಯಲ್ಲಿ ಹೆಲಿಪೋರ್ಟ್ ಸ್ಥಾಪನೆ:ಸಚಿವ ಸಿ.ಪಿ.ಯೋಗೇಶ್ವರ್

ಕಲಬುರಗಿ,ಏ.5:ಈಶಾನ್ಯ ಕರ್ನಾಟಕದ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಲಬುರಗಿಯಲ್ಲಿ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್) ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ಅವರು ಹೇಳಿದರು.
ಸೋಮವಾರ ಚಿಂಚೋಳಿ ತಾಲೂಕಿನ ತೆಲಂಗಾಣದ ಗಡಿಯಲ್ಲಿಯರುವ ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿಪೋತ ಜಲಪಾತ ವೀಕ್ಷಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಲಬುರಗಿಯಲ್ಲಿ ಈಗಾಗಲೇ ವಿಮಾನ ನಿಲ್ದಾಣ ಸ್ಥಾಪನೆ ಆಗಿರುವುದರಿಂದ ಈ ಭಾಗದ ವಾಯು ವಿಹಾರಕ್ಕೆ ಉತ್ತಮ ಸಂಪರ್ಕ ದೊರೆತಂತಾಗಿದೆ. ಹೀಗಾಗಿ ಕಲಬುರಗಿಯಲ್ಲಿ ನಾಲ್ಕೈದು ಹೆಲಿಕಾಪ್ಟರ್‍ಗಳು ನಿಲುಗಡೆಯಾಗುವಂತೆ ಹೆಲಿಪೋರ್ಟ್ ನಿರ್ಮಿಸಿದಲ್ಲಿ ಕಲಬುರಗಿಯಿಂದ ಜಿಲ್ಲೆಯ ಎತ್ತಿಪೋತ, ಗೊಟ್ಟಂಗೊಟ್ಟ ಜಲಪಾತ, ಚಂದ್ರಂಪಳ್ಳಿ ಜಲಾಶಯ ಪ್ರವಾಸಿ ತಾಣಗಳು ಸೇರಿದಂತೆ ಈ ಪ್ರದೇಶದ ಇನ್ನಿತರ ಪ್ರವಾಸಿ ತಾಣಗಳಿಗೆ ಹೋಗಲು ನೆರವಾಗಲಿದ್ದು, ದೂರದ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೂ ಇದು ಅನುಕೂಲವಾಗಲಿದೆ ಎಂದರು.
ಚಿಂಚೋಳಿ ತಾಲೂಕಿನ ಕುಂಚಾವರಂ ಪ್ರದೇಶ ವನ್ಯಜೀವಿ ತಾಣವಾಗಿದೆ. ನೆರೆಯ ತೆಲಾಂಗಣದ ಗಡಿಗೆ ಹೊಂದಿಕೊಂಡಂತೆ ಅನೇಕ ರಮಣೀಯ ಜಲಪಾತಗಳಿದ್ದು, ಪ್ರವಾಸಿಗರು ಇಲ್ಲಿಗೆ ಬಂದಿಳಿಯಲು ಎತ್ತಿಪೊತ್ತ ಹಾಗೂ ಚಂದ್ರಂಪಳ್ಳಿಯಲ್ಲಿ ಹೆಲಿಪ್ಯಾಡ್ ಸಹ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.
ಎತ್ತಿಪೊತ್ತ ಅಭಿವೃದ್ಧಿಗೆ 2 ಕೋಟಿ ರೂ: ಚಿಂಚೋಳಿ ತಾಲೂಕಿನ ಎತ್ತಿಪೋತ ಜಲಪಾತ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 2 ಕೋಟಿ ರೂ. ನೀಡಲಾಗುವುದು ಎಂದು ಸಚಿವ ಸಿ.ಪಿ.ಯೋಗೇಶ್ವರ ಹೇಳಿದರು.
ಜಲಾಶಯಕ್ಕೆ ಸಾರಿಗೆ ಸಂಪರ್ಕ ಕಲ್ಪಿಸಲು ಮುಖ್ಯ ರಸ್ತೆಯಿಂದ ಜಲಾಶಯಕ್ಕೆ ಕೂಡು ರಸ್ತೆ ನಿರ್ಮಾಣ, ವಾಚ್ ಟವರ್, ಯಾತ್ರಿ ನಿವಾಸ, ಶೌಚಾಲಯ, ಜಂಗಲ್ಸ್ ಲಾಡ್ಜ್ ನಿರ್ಮಿಸಲಾಗುವುದು. ಇದಕ್ಕಾಗಿ 5 ರಿಂದ 6 ಎಕರೆ ಪ್ರದೇಶ ಅವಶ್ಯಕತೆಯಿದ್ದು, ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿದಲ್ಲಿ ಎರಡೇ ತಿಂಗಳಲ್ಲಿಯೇ ಕೆಲಸ ಪ್ರಾರಂಭಿಸಲಾಗುವುದು ಎಂದರು.
ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ, ಚಿಂಚೋಳಿ ತಾಲೂಕಿನ ಕುಂಚಾವರಂ ಪ್ರದೇಶ ದಟ್ಟಕಾಡಿನಿಂದ ಎಲ್ಲರನ್ನು ಆಕರ್ಷಿಸುತ್ತಿದೆ. ಇಲ್ಲಿನ ಜಲಪಾತಗಳು ಮಳೆಗಾಲದಲ್ಲಿ ಪ್ರವಾಸಿಗರ ದಂಡೆ ಕಾಣಬಹುದಾಗಿದ್ದು, ನೆರೆಯ ಯಾದಗಿರಿ, ರಾಯಚೂರು ಸೇರಿದಂತೆ ಪಕ್ಕದ ತೆಲಂಗಾಣಾ ರಾಜ್ಯದ ಹೈದ್ರಾಬಾದ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಆದರೆ ಮೂಲಸೌಕರ್ಯದ ಕೊರತೆ ಕಾರಣ ಹೆಚ್ಚಿನ ಪ್ರಚಾರಕ್ಕೆ ಬಂದಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಈ ಪ್ರದೇಶವಿದ್ದು, ಇದರ ಸಮಗ್ರ ಅಭಿವೃದ್ಧಿ ಅವಶ್ಯಕವಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಕಲಬುರಗಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ ಚಿಂಚೋಳಿ ತಾಲೂಕಿನ ಅನೇಕ ಸ್ಥಳಗಳು ಪ್ರವಾಸಿ ತಾಣವಾಗಿ ಗುರುತಿಸುವ ಎಲ್ಲಾ ಅರ್ಹತೆಗಳಿವೆ. ಇತ್ತೀಚೆಗೆ ಈ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಂಸತ್ತಿನಲ್ಲಿಯೂ ಪ್ರಸ್ತಾಪಿಸಿದ್ದೇನೆ. ಇಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಸ್ಥಾಪಿಸಬೇಕು ಎಂಬುವುದು ಗ್ರಾಮಸ್ಥರ ಬೇಡಿಕೆಯಿದೆÉ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಬೇಕು. ಪ್ರವಾಸಿ ತಾಣವಾಗಿ ಮಾರ್ಪಟಲ್ಲಿ ನೆರೆಹೊರೆ ಜಿಲ್ಲೆ ಮತ್ತು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ಸಾಂಸ್ಕøತಿಕ ಕೊಡುಕೊಳ್ಳುವಿಕೆಯ ಜೊತೆಗೆ ಆರ್ಥಿಕ ಅಭಿವೃದ್ಧಿಯೂ ಆಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಐನೊಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಗೌತಮ ಪಾಟೀಲ್, ವೆಂಕಟಾಪುರ ಗಾಮ ಪಂಚಾಯತ್ ಅಧ್ಯಕ್ಷೆ ರೇಣುಕಾ ರಾಜು ರಾಠೋಡ, ಕುಂಚಾವರಂ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ರಮೇಶ ಸಂಕಟ್ಟಿ, ತಹಶೀಲ್ದಾರ ಅರುಣ ಕುಲಕರ್ಣಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅನೀಲ ರಾಠೋಡ, ಎಸಿಎಫ್ ಬಾಬುರಾವ ಪಾಟೀಲ್ ಸೇರಿದಂತೆ ಗ್ರಾಮಸ್ಥರು ಇದ್ದರು.